   ಮೂಲದೊಡನೆ ಪರಿಶೀಲಿಸಿ

ಕೀಟಗಳು

 ಸಂಧಿಪದಿ (ಆತ್ರ್ರೊಪೊಡ) ವಂಶದ ಕೀಟ ವರ್ಗಕ್ಕೆ ಸೇರಿದ ಪ್ರಾಣಿಗಳು. ವರ್ಣರಂಜಿತ ಪತಂಗ, ಹೂಗಳ ಪರಾಗ ಉಂಡು ಮಧು ಶೇಖರಿಸುವ ಜೇನು, ಇರುವೆ, ದುಂಬಿ, ಕಂಬಳಿಹುಳ ಎಲ್ಲ ಕೀಟಗಳೇ.

 ಸಂಕ್ಷಿಪ್ತವಾಗಿ ಕೀಟಗಳನ್ನು ಕೆಳಕಂಡಂತೆ ವಿವರಿಸಬಹುದು: ತಲೆ, ಎದೆ ಮತ್ತು ಉದರ ಎಂಬ ಮೂರು ಭಾಗಗಳಾಗಿ ವಿಂಗಡಿಸಿದ ದೇಹವನ್ನುಳ್ಳ ಮತ್ತು ಉಸಿರಾಟದಲ್ಲಿ ಸಹಾಯಕವಾದ ಶ್ವಾಸನಾಳಗಳನ್ನುಳ್ಳ (ಟ್ರೇಕಿಯ) ಸಣ್ಣಗಾತ್ರದಿಂದ ಹಿಡಿದು ಸೂಕ್ಷ್ಮಗಾತ್ರದವರೆಗಿನ ಪ್ರಾಣಿಗಳು. ತಲೆಯಲ್ಲಿ ಒಂದು ಜೊತೆ ಆಂಟೆನಗಳು (ಕುಡಿಮೀಸೆ), ಒಂದು ಜೊತೆ ಮ್ಯಾಂಡಿಬಲ್‍ಗಳು ಮತ್ತು ಎರಡು ಜೊತೆ ಮ್ಯಾಕ್ಸಿಲೆ ಎಂಬ ಭಾಗಗಳು ಇವೆ. ಎದೆಯ ಭಾಗದಲ್ಲಿ ಮೂರು ಜೊತೆ ಕಾಲುಗಳು ಮತ್ತು ಒಂದು ಅಥವಾ ಎರಡು ಜೊತೆ ರೆಕ್ಕೆಗಳು ಇವೆ. ಉದರ ಭಾಗದಲ್ಲಿ ಚಲನಾಂಗಗಳೇನೂ ಇಲ್ಲ. ಉದರದ ಹಿಂತುದಿಯಲ್ಲಿ ಜನನಾಂಗ ದ್ವಾರವಿದೆ. ಜೀವನಕ್ರಮದಲ್ಲಿ ಮರಿಗಳು ಪ್ರೌಢಾವಸ್ಥೆಗೆ ಬರುವಾಗ ಸಾಮಾನ್ಯವಾಗಿ ರೂಪ ಪರಿವರ್ತನೆ ಉಂಟು.

 ಕೀಟವರ್ಗದ ವೈವಿಧ್ಯ: ಕೀಟವರ್ಗ ಪ್ರಾಣಿವರ್ಗಗಳಲ್ಲೆಲ್ಲ ಅತ್ಯಂತ ದೊಡ್ಡದು. ಈ ವರ್ಗದಲ್ಲಿರುವಷ್ಟು ಪ್ರಭೇದಗಳು ಇನ್ಯಾವ ವರ್ಗದಲ್ಲೂ ಇಲ್ಲ. ಕೀಟಶಾಸ್ತ್ರಜ್ಞರು ಇದುವರೆಗೆ ಸುಮಾರು ಎಂಟುಲಕ್ಷ ಕೀಟಜಾತಿಗಳನ್ನು ಶಾಸ್ತ್ರೀಯವಾಗಿ ವಿವರಿಸಿದ್ದಾರೆ. ಒಟ್ಟು 2 ರಿಂದ 3 ದಶಲಕ್ಷ ಕೀಟ ಪ್ರಭೇದಗಳಿವೆಯೆಂದು ಅಂದಾಜಿದೆ. ಒಂದು ಚಿಕ್ಕ ಪ್ರದೇಶದಲ್ಲಿರುವ ಒಂದು ಜಾತಿಯ ಕೀಟದ ಸಂಖ್ಯೆಯನ್ನು ತೆಗೆದುಕೊಂಡಾಗ ಕೀಟಪ್ರಪಂಚದ ಬೃಹತ್ಸಂಖ್ಯೆಗಳ ಅರಿವು ಸ್ವಲ್ಪ ಉಂಟಾಗುತ್ತದೆ. ಉದಾಹರಣೆಗೆ ಒಂದು ಎಕರೆ ಶೀತಪ್ರದೇಶದಲ್ಲಿ ನಾಲ್ಕು ದಶಲಕ್ಷ ಕಾಲೆಂಬೋಲ ಗಣದ ಕೀಟಗಳು ವಾಸಿಸಬಲ್ಲವಂತೆ. ಇನ್ನೊಂದು ಅಂದಾಜಿನ ಪ್ರಕಾರ ಒಂದು ಬೇಸಗೆಯಲ್ಲಿ ಒಂದು ಜೊತೆ ನೊಣಗಳ ಸಂತತಿ ಒಟ್ಟು 1.91  1020ರಷ್ಟು ಆಗಬಲ್ಲದಂತೆ ಈ ಅಪಾರ ಸಂಖ್ಯಾಬಲಕ್ಕೆ ಕಾರಣ ಕೀಟಗಳ ಸಣ್ಣ ಗಾತ್ರ, ಸಂತಾನೋತ್ಪತ್ತಿಯ ತೀವ್ರತೆ ಮತ್ತು ವಿವಿಧ ಬಗೆಯ ಆಹಾರಗಳಿಗೆ ಅವು ತೋರುವ ಹೊಂದಾಣಿಕೆ ಮುಂತಾದುವು-ಎಂದು ವಿಜ್ಞಾನಿಗಳ ಅಭಿಪ್ರಾಯ. ದೇಹದ ಗಾತ್ರ ಸಣ್ಣದಾದ್ದರಿಂದ ಮೊಟ್ಟೆಯಿಂದ ಪ್ರಾಯಕ್ಕೆ ಬರಲು ಅಲ್ಪಕಾಲ ಸಾಕು. ಆಹಾರ ಸೇವನೆಯೂ ಕಡಿಮೆ. ಸಂತಾನೋತ್ಪತ್ತಿಯ ವೇಗಕ್ಕೆ ಉದಾಹರಣೆ ಕೊಡುವುದಾದರೆ ಒಂದು ಜಾತಿಯ ಗೆದ್ದಲಿನ ರಾಣಿಕೀಟ ದಿನಕ್ಕೆ 43,000 ಮೊಟ್ಟೆಗಳನ್ನು ಇಡಬಲ್ಲುದಂತೆ; ಜೊತೆಗೆ ತಲೆಮಾರುಗಳು ಅಲ್ಪಾವಧಿಯವು (ಒಂದು ವರ್ಷದಲ್ಲಿ ಹಲವಾರಿರಬಹುದು). ಒಂದು ಜಾತಿಯ ಶೀಡೆ ಎಂಟು ತಿಂಗಳಲ್ಲಿ 16 ತಲೆಮಾರುಗಳನ್ನು ಉತ್ಪತ್ತಿಮಾಡಬಲ್ಲುದಂತೆ. ಕೀಟಗಳಿಗೆ ಹಾರಾಟದ ಶಕ್ತಿ ಇರುವುದರಿಂದ ಇವು ಅನುಕೂಲವಾದ ಸನ್ನಿವೇಶವನ್ನು ಪತ್ತೆಹಚ್ಚಿ ಅಲ್ಲಿಗೆ ಹಾರಿಹೋಗಬಲ್ಲವು. ಕೀಟವರ್ಗದಲ್ಲಿ ಕಾಣಬರುವ ರೂಪ ಪರಿವರ್ತನೆಯೂ ಇದರ ವೈವಿಧ್ಯಕ್ಕೆ ಸಹಾಯಕವಾಗಿದೆ. ಇದರಿಂದ ಮರಿ ಹುಳು, ಪ್ರೌಢಕೀಟಗಳೆರಡೂ ತಮಗೆ ತಕ್ಕ ರೀತಿಯಲ್ಲಿ ಬಾಹ್ಯ ಸನ್ನಿವೇಶಕ್ಕೆ ಹೊಂದಿಕೊಂಡು ಬೆಳೆಯಲು ಸಾಧ್ಯ. ಕೀಟವರ್ಗದ ವೈವಿಧ್ಯ ಮತ್ತು ಸಂಖ್ಯಾಬಲಗಳನ್ನು ಪರಿಶೀಲಿಸಿ ಭೂಗ್ರಹವನ್ನು `ಕೀಟಗೋಳ' ಎಂದೇ ಕರೆಯುವುದು ವಿಜ್ಞಾನ ದೃಷ್ಟಿಯಿಂದ ಅತಿಶಯೋಕ್ತಿ ಅಲ್ಲ. ಎಲ್ಲ ಬಗೆಯ ಜೈವಿಕ ವಸ್ತುಗಳೂ ಒಂದಲ್ಲ ಒಂದು ಕೀಟಜಾತಿಗೆ ಆಹಾರ. ಆಹಾರ ಲಭ್ಯತೆಯಿರುವ ಎಲ್ಲ ಭೂ ಮತ್ತು ಸಿಹಿ ನೀರು ಪ್ರದೇಶಗಳಲ್ಲೂ ಕೀಟ ಸಮುದಾಯಗಳುಂಟು. (ಉಪ್ಪು ನೀರಿನಲ್ಲೂ ಕೆಲವು ಜಾತಿ ಕೀಟಗಳು ವಾಸಿಸುವುವು).

 ಕೀಟಗಳಲ್ಲಿ ಕಾಣಬರುವ ಹಲವಾರು ವೈಶಿಷ್ಟ್ಯಗಳಲ್ಲಿ ಅವುಗಳ ವೈವಿಧ್ಯಪೂರ್ಣ ಆಹಾರಸಂಪಾದನಾ ರೀತಿ ಹಾಗೂ ಜೀವನಕ್ರಮಗಳು ಮುಖ್ಯವಾದವು. ಕೊಡತಿ ಕೀಟ ಇತ್ಯಾದಿ ಕೆಲವು ಕೀಟಗಳು ಬೇಟೆಯಾಡಿ ಆಹಾರವನ್ನು ಸಂಪಾದಿಸಿದರೆ ಕೆಲವು ಪರಾವಲಂಬಿ ಕೀಟಗಳು ಆತಿಥೇಯ ಪ್ರಾಣಿಗಳ ರಕ್ತನಾಳಗಳಲ್ಲಿ ಜೀವಿಸಿದ್ದು ತಮ್ಮ ಚರ್ಮದ ಮೂಲಕ ರಸರೂಪದ ಆಹಾರವನ್ನು ಹೀರುತ್ತವೆ. ಅನೇಕ ಬಗೆಯ ಕೀಟಗಳಲ್ಲಿ ಮಾನವ ಸಮಾಜದಲ್ಲಿರುವಂತೆಯೇ ಸಮಾಜವ್ಯವಸ್ಥೆ, ಸಹಕಾರಪದ್ಧತಿಗಳನ್ನು ಕಾಣಬಹುದು. ಉದಾಹರಣೆಗೆ 
ಗೆದ್ದಲು, ಜೇನು, ಇರುವೆ, ಕಣಜ ಇತ್ಯಾದಿ. ಇವುಗಳ ಸಮಾಜವ್ಯವಸ್ಥೆಯಲ್ಲಿ ದುಡಿಮೆಯ ಹಂಚಿಕೆಯನ್ನೂ ನೋಡಬಹುದು. ಈ ಹಂಚಿಕೆಯಲ್ಲಿ ನಿಯಮಿತ ಕರ್ತವ್ಯಗಳಿಗೆ ತಕ್ಕಂತೆ ಕೀಟಗಳ ಅಂಗಾಂಗ ರಚನೆಯಲ್ಲೂ ಬದಲಾವಣೆಗಳಾಗಿವೆ. ಕೆಲಸಗಾರ, ಸೈನಿಕ, ದಾದಿ, ರಾಣಿ ಮುಂತಾದ ಕೀಟ ಬಗೆಗಳನ್ನು ಗುರುತಿಸಬಹುದು. ಕೆಲವು ಜಾತಿಯ ಇರುವೆಗಳಲ್ಲಿ ಶಿಲೀಂದ್ರ ಕೃಷಿ, ಇತರ ಕೀಟಗಳನ್ನು ಅವು ಸ್ರವಿಸುವ ಸಿಹಿರಸಕ್ಕಾಗಿ ಸಾಕಿ ಅವುಗಳಿಂದ ದುಡಿಸಿಕೊಂಡು ಆರಾಮವಾಗಿರುವುದು ಮುಂತಾದ ವಿಚಿತ್ರ ಹಾಗೂ ವಿಶೇಷ ಪ್ರವೃತ್ತಿಗಳೂ ಕಾಣಬರುತ್ತವೆ.

 ಕೀಟವರ್ಗ ಸುಮಾರು 25 ಕೋಟಿ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದು ಆಗಿನಿಂದ ವಿಕಾಸ ಹೊಂದುತ್ತಿದೆಯೆಂದು ಕೀಟಶಾಸ್ತ್ರಜ್ಞರ ಅಭಿಪ್ರಾಯ. ಖಚಿತವಾಗಿ ಗೊತ್ತಾಗಿರುವ ಕೀಟ ಪೆನ್ಸಿಲ್ವೇನಿಯನ್ ಕಾಲದ ಶಿಲಾಸ್ತರಗಳಿಂದ ದೊರೆಕಿದೆ. (ಇದು ಇಂದಿನ ಕೊಡತಿಕೀಟಗಳನ್ನು ಹೋಲುತ್ತದೆ.) ಕೀಟಗಳು ಬಹುಶಃ ಡಿವೋನಿಯನ್ ಯುಗದಲ್ಲಿ ಅಸ್ತಿತ್ವಕ್ಕೆ ಬಂದು ಕಾರ್ಬಾನಿಫೆರಸ್ ಮತ್ತು ಪರ್ಮಿಯನ್ ಕಾಲಗಳಲ್ಲಿ ವಿಕಾಸದಲ್ಲಿ ಮುಂದುವರಿದು ಟ್ರೈಯಾಸಿಕ್ ಮತ್ತು ಜುರಾಸಿಕ್ ಕಾಲಗಳ ಹೊತ್ತಿಗೆ ಇಂದಿನ ಕೀಟಗಳನ್ನು ಹೋಲುವ ಸ್ಥಿತಿಗೆ ಬಂದಿದ್ದುವು. ಕೀಟಗಳ ಪೂರ್ವಜ ಪ್ರಾಣಿಗಳು ಬಹುಶಃ ಟ್ರೈಲೋಬೈಟ್ ಎಂಬ ಗುಂಪಿನ ಪ್ರಾಣಿಗಳೊಂದಿಗೆ ಏಕಕಾಲದಲ್ಲಿ ಅಸ್ತಿತ್ವಕ್ಕೆ ಬಂದುವೆಂದೂ ಇವುಗಳಿಂದ ಕಾಲಾನಂತರ ಅರ್ಯಾಕ್ನಿಡ, ಕ್ರಸ್ಟೇಸಿಯ, ಕೈಲೊಪೊಡ ಮತ್ತು ಇನ್ಸೆಕ್ಟ (ಕೀಟಗಳು) ವರ್ಗಗಳು ಉದ್ಭವವಾದುವೆಂದೂ ಊಹೆಯಿದೆ. ಈ ಪೂರ್ವಜ ಪ್ರಾಣಿಗಳನ್ನು ಪ್ರೋಟಾತ್ರ್ರೊಪೊಡ ಎಂಬ ಗುಂಪಿಗೆ ಸೇರಿಸಲಾಗಿದೆ. ಇವುಗಳೆಲ್ಲ ಸಾಗರದ ಉಪ್ಪುನೀರಿನಲ್ಲಿ ವಾಸಿಸುತ್ತಿದ್ದವೆಂದೂ ಇವುಗಳ ದೇಹ ಖಂಡಗಳಾಗಿ ವಿಂಗಡಣೆಯಾಗಿದ್ದು, ಅದರ ಮೇಲೆಲ್ಲ ಕೈಟಿನ್ ಎಂಬ ವಿಶೇಷ ಬಗೆಯ ವಸ್ತುವಿನ ಕವಚವಿತ್ತೆಂದೂ ಹೇಳಲಾಗಿದೆ. ಇವುಗಳಲ್ಲಿ ಕೀಲುಕಾಲುಗಳಿರಲಿಲ್ಲ. ಇವು ದೇಹವನ್ನು ನೆಲಕ್ಕೆ ತಾಗಿಸಿ ತೆವಳುತ್ತ ಚಲಿಸುತ್ತಿದ್ದುವು ಅಥವಾ ದೇಹವನ್ನು ಪಕ್ಕದಿಂದ ಪಕ್ಕಕ್ಕೆ ಚಲಿಸಿ ಈಜುತ್ತಿದ್ದುವು. ಕಾಲ ಕ್ರಮೇಣ ಕೀಲುಕಾಲುಗಳು ಉದ್ಭವಿಸಿದುವು. ಹಾಗೂ ದೇಹದ ಖಂಡಗಳ ಸಂಖ್ಯೆಯೂ ಕಡಿಮೆಯಾಗುತ್ತ ಬಂದು ಕೊನೆಗೆ 20ಕ್ಕೆ ನಿಂತಿತು.

 ಕೀಟವರ್ಗದ ವಿಕಸನ ದೃಷ್ಟಿಯಿಂದ ಕೈಟಿನ್ ಅನುಕೂಲ ಪ್ರತಿಕೂಲಗಳೆರಡಕ್ಕೂ ಕಾರಣವಾಗಿದೆ. ಒಣಸನ್ನಿವೇಶಗಳಲ್ಲಿ ದೇಹದೊಳಗಿನ ಶೀತಾಂಶ ಹೊರಗೆ ಹೋಗದಂತೆ ಇದು ತಡೆಗಟ್ಟುವುದರಿಂದ, ಈ ಜೀವಿಗಳು ಜಲಜೀವನವನ್ನು ತ್ಯಜಿಸಿ, ಭೂ ಭಾಗಗಳಿಗೆ ವಲಸೆ ಬಂದು ಕ್ರಮೇಣ ಮರಳ್ಗಾಡುಗಳಿಗೂ ಹೊಂದಿಕೊಳ್ಳಲು ಸಾಧ್ಯವಾಯಿತು. ಆದರೆ ಚಿಪ್ಪಿನಂತೆ ಗಡುಸಾಗಿರುವ ಈ ಹೊದಿಕೆಯನ್ನು ಬೆಳೆವಣಿಗೆಯ ಪ್ರತಿಹಂತದಲ್ಲೂ ಕಳಚಬೇಕಾಯಿತು. ಪೊರೆಬಿಟ್ಟ ಹುಳುವಿನ ಮೈ ಮೆತುವಾದ್ದರಿಂದ ಆಕಾರವನ್ನು ಕಳೆದುಕೊಳ್ಳುವ ಅಪಾಯವೇ ಅಲ್ಲದೆ, ಪುನಃ ಪೊರೆಬಲಿಯುವ ವರೆಗೂ ಕೀಟ ಅಸಹಾಯಕ ಸ್ಥಿತಿಯಲ್ಲಿರುತ್ತದೆ.

 ಕೀಟಗಳಲ್ಲಿ ಜ್ಞಾನೇಂದ್ರಿಯಗಳ ಮೂಲಕ ಸನ್ನಿವೇಶದ ಅರಿವು ಪಡೆದೇ ಅಪಾಯದಿಂದ ದೂರವಾಗಿ ಇಲ್ಲವೆ ಲಾಭವಿದ್ದೆಡೆಗೆ ಚಲನೆಯನ್ನು ಪ್ರಚೋದಿಸುವಂಥ ನರಮಂಡಲವಿದೆ. ಕೀಟಗಳ ಮಿದುಳು ಅತಿಸೂಕ್ಷ್ಮವಾದರೂ ಇರುವೆ, ಜೇನು ಇವುಗಳ ಹುಟ್ಟುಗುಣದ ನಡವಳಿಕೆ ನೋಡಿದರೆ ಇದು ಬಹಳ ಉನ್ನತಮಟ್ಟದ ರಚನೆಯುಳ್ಳದ್ದೆಂದು ವೇದ್ಯವಾಗುತ್ತದೆ. ಆದರೂ ಸ್ವಾನುಭವದಿಂದ ಜ್ಞಾಪಕಶಕ್ತಿ ಬೆಳೆಸಿಕೊಂಡು, ಜೀವನರೀತಿಯನ್ನು ಬದಲಾಯಿಸಿಕೊಳ್ಳುವ ಬುದ್ಧಿಶಕ್ತಿ ಕೀಟಗಳಿಗೆ ಇಲ್ಲ.

 ಕೀಟಗಳ ದೇಹರಚನೆಯ ವಿಶೇಷವೆಂದರೆ ವದನಾಂಗಗಳು ಮತ್ತು ಚಲನಾಂಗಗಳು ಜೋಡಿ ಶ್ರೇಣಿಯಲ್ಲಿರುವುದು. ಕುಡಿಮೀಸೆಗಳು (ಆಂಟೆನೆ) ನೆತ್ತಿಯಮೇಲೆ ಕಣ್ಣುಗಳ ಮುಂದೆ ಅಥವಾ ನಡುವೆ ಇರುವ ಹೆಚ್ಚು ಚಲನ ಸ್ವಾತಂತ್ರ್ಯವಿರುವ ಒಂದು ಜೊತೆ ಉಪಾಂಗಗಳು. ಇವುಗಳಲ್ಲಿ ಹಲವಾರು ಖಂಡಗಳನ್ನು ನೋಡಬಹುದು. ನಿಮ್ನವರ್ಗದ ಕೀಟಗಳಲ್ಲಿ ಇವು ಮಣಿಸರದಂತಿವೆ. ಉನ್ನತಮಟ್ಟದ ಕೀಟಗಳ ಕುಡಿಮೀಸೆಗಳ ತುದಿಯಲ್ಲಿ ಬಾಚಣಿಗೆ ಹಲ್ಲುಗಳಂಥ, ಚಮಚದ ಹಿಡಿಯಂಥ, 
ದೊಣ್ಣೆಯ ಹಿಡಿಯಂಥ, ಫಲಕಗಳ ಕಟ್ಟಿನಂಥ ರಚನೆಗಳು ಇರುವುದುಂಟು. ಕುಡಿಮೀಸೆಗಳು ವಿಶೇಷವಾದ ಜ್ಞಾನೇಂದ್ರಿಯಗಳು ವದನಾಂಗಗಳು ಮುಖ್ಯವಾಗಿ ಮೂರೂಜೊತೆ ರಚನೆಗಳಿಂದ ಕೂಡಿವೆ: (i) ಅಗಿಯಲು ಉಪಯುಕ್ತವಾದ ಮ್ಯಾಂಡಿಬಲ್ ಜೊತೆ, (ii) ಬಾಯಿಯಿಂದ ಆಹಾರ ಬೀಳದಂತೆ ತಡೆಯುವ ಒಂದು ಜೊತೆ ಪ್ರಥಮ ಮ್ಯಾಕ್ಸಿಲ, (iii) ಒಂದು ಜೊತೆ ದ್ವಿತೀಯ ಮ್ಯಾಕ್ಸಿಲ ಕೂಡಿಕೊಂಡು ಆಗಿರುವ ಲೇಬಿಯಂ ಅಥವಾ ಕೆಳತುಟಿ. ಇವಲ್ಲದೆ ಲೇಬ್ರಂ ಅಥವಾ ಮೇಲ್ದುಟಿ, ಬಾಯಿಯೊಳಗಿನ ಹೈಪೋಫ್ಯಾರಿಂಕ್ಸ್ ಮತ್ತು ಎಪಿಫ್ಯಾರಿಂಕ್ಸ್ ಇವು ಕೂಡ ವದನಾಂಗದ ಭಾಗಗಳೇ. ಕೀಟ ತೆಗೆದುಕೊಳ್ಳುವ ಆಹಾರದ ಲಕ್ಷಣದ ಮೇಲೆ ಅದರ ವದನಾಂಗಗಳ ರಚನೆ ಬದಲಾವಣೆಯಾಗಬಹುದು. ಉದಾಹರಣೆಗೆ ಗಟ್ಟಿ ಪದಾರ್ಥಗಳನ್ನು ತುಂಡುಮಾಡಿ ಅಗಿದು ತಿನ್ನುವ ಜಿರಲೆ, ಮಿಡತೆ, ಕಂಬಳಿಹುಳು ಮತ್ತು ದುಂಬಿಗಳಲ್ಲಿ ಮೊನಚಾದ ಹಲ್ಲುಗಳಿವೆ. ಸಸ್ಯಗಳ ರಸ, ಪ್ರಾಣಿಗಳ ರಕ್ತಹೀರಿ ಜೀವಿಸುವ ಕೀಟಗಳ ವದನಾಂಗಗಳು ಸೂಜಿಯಂತೆ ಚೂಪಾದ ತುದಿಯುಳ್ಳ ಕೊಳವೆಗಳಂತಿವೆ. ಹೂಗಳ ಮಕರಂದ ಕುಡಿಯುವ ಪತಂಗಗಳ ವದನಾಂಗಗಳು ಆನೆಯ ಸೊಂಡಿಲಿನಂತಿವೆ. ಪರಾಗವನ್ನು ಕೂಡಿಸುವ ಜೇನಿನ ಮ್ಯಾಕ್ಸಿಲ ಮತ್ತು ಕೆಳತುಟಿ ಈ ಕಾರ್ಯಕ್ಕೆ ತಕ್ಕಂತೆ ಹೊಂದಿಕೊಂಡಿವೆ. ಆಹಾರಕಣಗಳನ್ನು ಜೊಲ್ಲಿನಿಂದ ನೆನೆಸಿ ಕರಗಿಸಿ ಹೀರಿಕೊಳ್ಳುವ ನೊಣಗಳಲ್ಲಿ ಮೇಲ್ದುಟಿ, ನಾಲಿಗೆ, ಕೆಳತುಟಿ ಇವು ಮೂರು ಕೂಡಿ ಸ್ಪಂಜಿನಂಥ ಅಂಗವಾಗಿವೆ.

 ಕೀಟಗಳ ಚಲನಾಂಗಗಳು: ಕೀಲುಗಳುಳ್ಳ 3 ಜೊತೆ ಕಾಲುಗಳು ಮತ್ತು ಪ್ರೌಢಾವಸ್ಥೆಯಲ್ಲಿ ಸಾಮಾನ್ಯವಾಗಿ ಎರಡು ಜೊತೆ ರೆಕ್ಕೆಗಳು. (ಅನೇಕ ಮರಿ ಕೀಟಗಳಿಗೆ ಆರಕ್ಕಿಂತ ಹೆಚ್ಚು ಕಾಲು ಅಥವಾ ಕಾಲಿಲ್ಲದೇ ಇರುವುದು, ಅನೇಕ ಪ್ರೌಢ ಕೀಟಗಳಿಗೆ ಒಂದೇ ಜೊತೆ ರೆಕ್ಕೆ ಅಥವಾ ರೆಕ್ಕೆಗಳೇ ಇಲ್ಲದಿರುವುದನ್ನು ಕಾಣಬಹುದು). ಚಲನಾಂಗಗಳು ದೇಹದ ಮಧ್ಯಭಾಗವಾದ ಎದೆಗೆ ಜೋಡಣೆಗೊಂಡಿವೆ. ಸಂಧಿಪದಿ ಎಂಬ ಹೆಸರಿಗೆ ಅನುಗುಣವಾಗಿ ಕಾಲಿನಲ್ಲಿ ಐದು ಮುಖ್ಯವಾದ ಸಂಧಿಗಳಿವೆ: ದೇಹದ ಕಡೆಯಿಂದ ಆರಂಭವಾಗಿ ಇವುಗಳಿಗೆ ಕ್ರಮವಾಗಿ ಕಾಕ್ಸ, ಟ್ರೋಕ್ಯಾಂಟರ್, ಫೀಮರ್, ಟಿಬಿಯ ಮತ್ತು ಟಾರ್ಸಸ್ ಎಂದು ಹೆಸರು. ಟಾರ್ಸಸಿನಲ್ಲಿ ಎರಡರಿಂದ ಐದು ಉಪಸಂಧಿಗಳಿರಬಹುದು. ಟಾರ್ಸಸಿನ ಕೊನೆಯಲ್ಲಿ 2 ನಖಗಳು ಮತ್ತು ಅವುಗಳ ಮಧ್ಯದಲ್ಲಿ ಒಂದು ಮೆತ್ತನೆಯ ಗುಬುಟು ಇರುವುದುಂಟು. ಅಡ್ಡಿ ಆತಂಕವಿಲ್ಲದ ಚಲನೆಗೆ ಕಾಲುಗಳು ಸಹಾಯಕವಾಗಿವೆ. ಚಲನೆಯೊಂದೇ ಅಲ್ಲದೆ ಭೂಮಿಯಲ್ಲಿ ತೋಡುವಿಕೆ (ಉದಾ: ಚಿಮ್ಮಂಡೆ). ಬೇಟೆಯನ್ನು ಹಿಡಿದುಕೊಳ್ಳುವುದು (ಉದಾ: ಕೊಡತಿಕೀಟ, ಮ್ಯಾಂಟಿಸ್ ಕೀಟ), ಕುಪ್ಪಳಿಸುವುದು (ಉದಾ: ಮಿಡತೆ). ಇನ್ನಿತರ ಉಪಕಾರ್ಯಗಳಿಗೂ ಕಾಲುಗಳು ಸಹಾಯಕ.

 ಎದೆಯ ಎರಡನೆಯ ಮತ್ತು ಮೂರನೆಯ ಖಂಡಗಳ ಮೈ ಹೊದಿಕೆ ತೆಳುವಾಗಿ ವಿಸ್ತರಿಸಿದ ಭಾಗಗಳೇ ರೆಕ್ಕೆಗಳು. ರೆಕ್ಕೆಯ ಮೇಲಿನ, ಕೆಳಗಿನ ಪದರಗಳ ಮಧ್ಯೆ ಕವಲೊಡೆದಿರುವ ನಾಳಗಳುಂಟು. ಇವುಗಳಲ್ಲಿ ಕೆಲವು ಶ್ವಾಸನಾಳಗಳು. ಇನ್ನು ಕೆಲವು ರಕ್ತನಾಳಗಳು. ರೆಕ್ಕೆಯ ಆಕಾರ ತ್ರಿಕೋಣದಂತೆ. ದೇಹದ ಒಂದು ಭಾಗದ ಮುಂದಿನ ಮತ್ತು ಹಿಂದಿನ ಎರಡು ರೆಕ್ಕೆಗಳೂ ಒಟ್ಟಿಗೆ ಚಲಿಸಲು ಸೂಕ್ಷ್ಮವಾದ ಕೊಕ್ಕೆ, ಕೂದಲು ಮತ್ತು ಮುಳ್ಳುಗಳ ಮೂಲಕ ಸಂಪರ್ಕವಿದೆ. ಡಿಪ್ಪಿರ ಗಣದ ಕೀಟಗಳಲ್ಲಿ ಒಂದೇ ಜೊತೆ ರೆಕ್ಕೆ ಇದೆ; ಹಿಂದಿನ ರೆಕ್ಕೆಗಳಿಗೆ ಬದಲು ಸಮತೋಲನೆಯನ್ನು ಕಾಯುವ ಅಂಗಗಳು (ಹಾಲ್ಟಿಯರ್ಸ್) ಇವೆ. ಕೋಲಿಯಾಪ್ಟಿರ ಗಣದ ಕೀಟಗಳಲ್ಲಿ ಮುಂದಿನ ರೆಕ್ಕೆಗಳು ದಪ್ಪ ಮತ್ತು ಗಡುಸಾದ ಎಲಿಟ್ರಗಳಾಗಿ ರೂಪಾಂತರವಾಗಿ ಕೀಟ ವಿಶ್ರಾಂತಿಯಲ್ಲಿದ್ದಾಗ ಹಾರಾಟಕ್ಕೆ ಉಪಯುಕ್ತವಾದ ಹಿಂದಿನ ರೆಕ್ಕೆಗಳನ್ನು ಮುಚ್ಚಿ ಸಂರಕ್ಷಿಸುತ್ತವೆ. ಅಂತೆಯೇ ಹೆಟಿರಾಪ್ಟಿರ ಗಣದಲ್ಲಿ ಮುಂದಿನ ರೆಕ್ಕೆಯ ತೊಟ್ಟಿನ ಅರ್ಧಭಾಗ ದಪ್ಪ ಮತ್ತು ಗಡುಸಾದ ಹೆಮಿಎಲಿಟ್ರ ಆಗಿದೆ. ಆರ್ಥಾಪ್ಟಿರ ಗಣದಲ್ಲಿ ಮುಂದಿನ ರೆಕ್ಕೆ ಚಕ್ಕಳದಂತೆ ಗಡುಸಾಗಿದೆ. ಇದಕ್ಕೆ ಟೆಗ್ಮೈನ ಎಂದು ಹೆಸರು.

 ಜೀರ್ಣಾಂಗ ವ್ಯವಸ್ಥೆ: ಕೀಟಗಳಲ್ಲಿ ಜೀರ್ಣಾಂಗ ವ್ಯವಸ್ಥೆಯೆಂದರೆ ದೇಹದ ಉದ್ದದಷ್ಟೆ ಅಥವಾ ಹೆಚ್ಚು ಉದ್ದ ಇರುವ ಸುರುಳಿ ಸುತ್ತಿಕೊಂಡಿರುವ ಒಂದು ಕೊಳವೆ. 
ದ್ರವರೂಪದ ಆಹಾರವನ್ನು ಸೇವಿಸುವ ಕೀಟಗಳಲ್ಲಿ ಇದರ ಉದ್ದ ಹೆಚ್ಚು. ಈ ಕೊಳವೆಯಲ್ಲಿ ಮುಂಗರುಳು, ನಡುಕರುಳು ಮತ್ತು ಹಿಂಗರುಳು ಎಂಬ ಮೂರು ಮುಖ್ಯವಾದ ಭಾಗಗಳಿವೆ: ಮುಂಗರುಳು ಮತ್ತು ಹಿಂಗರುಳುಗಳು ದೇಹದೊಳಕ್ಕೆ ಚಾಚಿದ ಹೊರಚರ್ಮದ ಭಾಗಗಳಾದ್ದರಿಂದ ಇವುಗಳಲ್ಲಿ ಚರ್ಮದ ಮೇಲೆ ಇರುವಂಥ ಮೇಲ್ಪೊರೆಯ ಪದರವನ್ನು ಕಾಣಬಹುದು.

 ಮುಂಗರುಳಿನ ಮುಖ್ಯ ಭಾಗಗಳಿವು. 1 ಬಾಯಿಯ ಮುಂದಿನ ಆಹಾರ ಕುಳಿ: ಇದು ವದನಾಂಗಗಳಿಗೂ ಮೇಲುತುಟಿಗೂ ಮಧ್ಯದ ಭಾಗ. ತಾತ್ಕಾಲಿಕವಾಗಿ ಆಹಾರ ಶೇಖರಣೆ ಮಾಡುವುದು ಮತ್ತು ಆಹಾರವನ್ನು ಜೊಲ್ಲಿನಿಂದ ತೋಯಿಸುವುದು ಇಲ್ಲಿಯೇ. 2 ಗಂಟಲು: ಬಾಯಿಗೂ ಆಹಾರನಾಳಕ್ಕೂ ನಡುವಣ ಭಾಗ. 3 ಆಹಾರನಾಳ: ನೇರವಾದ ಈ ಕೊಳವೆ ತಲೆಯ ಹಿಂಭಾಗದಿಂದ ಎದೆಯ ಮುಂಭಾಗದವರೆಗೂ ಚಾಚಿಕೊಂಡಿದೆ. ಇದರ ಒಳಪದರಲ್ಲಿ ಉದ್ದುದ್ದವಾಗಿರುವ ನೆರಿಗೆಗಳುಂಟು. 4 ಎರೆಚೀಲ: ಆಹಾರ ನಾಳದ ಉಬ್ಬಿಕೊಂಡಿರುವ ಹಿಂಭಾಗವಿದು; ಆಹಾರ ಶೇಖರಣೆಗೆ ಉಪಯೋಗಿಸಲ್ಪಡುತ್ತದೆ. 5 ಜಠರ: ಚೀಲದಂಥ ಭಾಗ. ಇದರ ಒಳಪದರದಲ್ಲಿ ಹಲ್ಲಿನಂತಿರುವ ಏಣುಗಳಿದ್ದು, ಆಹಾರವನ್ನು ಅರೆಯಲು ಅವು ಸಹಾಯಕವಾಗಿವೆ.

 ನಡುಕರುಳನ್ನು ಹೊಟ್ಟೆ ಎನ್ನಬಹುದು. ಇದರ ಆಕಾರ, ಧಾರಣಶಕ್ತಿ ಮುಂತಾದುವು ಕೀಟ ಸೇವಿಸುವ ಆಹಾರದ ಸ್ವಭಾವ ಮತ್ತು ಪ್ರಮಾಣವನ್ನು ಅನುಸರಿಸಿವೆ. ನಡುಕರುಳು ಕೆಲವು ಕೀಟಗಳಲ್ಲಿ ಚೀಲದಂತೆಯೂ ಬೇರೆಯವುಗಳಲ್ಲಿ ಸುರುಳಿ ಸುತ್ತಿಕೊಂಡಿರುವ ಕೊಳವೆಯಂತೆಯೂ ಇದೆ. ಅನೇಕ ಕೀಟಗಳಲ್ಲಿ ಹೊಟ್ಟೆಯ ಮುಂಭಾಗದಲ್ಲಿ ಬೆರಳಿನ ಆಕಾರದ ಕೊಳವೆಗಳ ಗೊಂಚಲುಂಟು. ಈ ಕೊಳವೆಗಳಿಗೂ ಕರುಳಿಗೂ ಸಂಪರ್ಕವಿರುವುದರಿಂದ ಇವು ಕರುಳಿನ ಹೀರುವಲಯವನ್ನು ಹೆಚ್ಚಿಸುತ್ತವೆ.

 ಹಿಂಗರುಳಿನಲ್ಲಿ ಮೂರು ಭಾಗಗಳನ್ನು ಗುರುತಿಸಬಹುದು: 1 ಸಣ್ಣ ಕರುಳು, (ಇಲಿಯಮ್), 2 ದೊಡ್ಡಕರುಳು (ಕೋಲಾನ್), 3 ಗುದನಾಳ. ಹಿಂಗರುಳಿನ ಪ್ರಾರಂಭದಲ್ಲಿ ಸೂಕ್ಷ್ಮವಾದ ಕೂದಲೆಳೆಯಂತಿರುವ ಮಾಲ್ಪಿಗೀಯನ್ ಟ್ಯೂಬ್ಯೂಲ್ಸ್ ಎಂಬ ಕೊಳವೆಗಳ ಗೊಂಚಲು ಅಂಟಿಕೊಂಡಿದೆ. ರಕ್ತದಿಂದ ವಿಸರ್ಜಿತವಾಗುವ ವಸ್ತುಗಳನ್ನು ಹೀರಿ, ಹಿಂಗರುಳಿಗೆ ಸೇರಿಸಿ ಹೊರಕ್ಕೆ ಹೋಗುವಂತೆ ಇವು ಮಾಡುತ್ತವೆ.

 ಉಸಿರಾಟದ ವ್ಯವಸ್ಥೆ: ಕೀಟಗಳಲ್ಲಿ ಶ್ವಾಸಕೋಶಗಳಿಲ್ಲ; ದೇಹಾದ್ಯಂತ ವ್ಯಾಪಿಸಿಕೊಂಡು ಕವಲೊಡೆದಿರುವ ಶ್ವಾಸನಾಳಗಳ (ಟ್ರೇಕಿಯ) ಮೂಲಕ ಉಸಿರಾಟ ನಡೆಯುತ್ತದೆ. ಎದೆ ಮತ್ತು ಉದರಗಳ ಪಕ್ಕಗಳಲ್ಲಿ ಹೊರದೇಹದ ಖಂಡಗಳಿಗನುಸಾರವಾಗಿ ಜೊತೆ ಜೊತೆಯಾಗಿರುವ ಶ್ವಾಸರಂಧ್ರಗಳ (ಸ್ಪೈರಕಲ್ಸ್) ಮೂಲಕ ಗಾಳಿ ಶ್ವಾಸನಾಳಗಳನ್ನು ಪ್ರವೇಶಿಸುತ್ತದೆ. ಜಲವಾಸಿಗಳಾದ ಕೆಲವು ಮರಿಕೀಟಗಳಲ್ಲಿ ಕಿವಿರುಗಳಿವೆ. ಶ್ವಾಸರಂಧ್ರಗಳ ಸಂಖ್ಯೆ ಹತ್ತು ಜೊತೆ-ಎದೆ ಭಾಗದಲ್ಲಿ 2. ಉದರ ಭಾಗದಲ್ಲಿ 8. 

 ಶ್ವಾಸರಂಧ್ರದ ರಚನೆ: ಗಾಳಿಯ ಪ್ರವೇಶಕ್ಕೆ ರಂಧ್ರ, ಅದರ ಸುತ್ತಲೂ ಹೊರ ಚರ್ಮದ ಅಂಗಳ ಮತ್ತು ಸ್ನಾಯುಗಳ ಹಾಗೂ ಹೊರ ಚರ್ಮದ ತುಂಡುಗಳಿಂದ ಕೂಡಿದ ಕವಾಟವಿದೆ. ದೇಹದ ಶೈತ್ಯಾಂಶ ಆವಿರೂಪದಲ್ಲಿ ಕಳೆದುಹೋಗುವುದನ್ನು ಕವಾಟ ವ್ಯವಸ್ಥೆ ತಡೆಗಟ್ಟುತ್ತದೆ. ಅನೇಕ ಕೀಟಗಳಲ್ಲಿ ಅಂಗಳಕ್ಕೆ ಬದಲು ಹೊರಚರ್ಮದ ಎರಡು ತುಟಿಗಳುಂಟು. 

 ಶ್ವಾಸನಾಳಗಳು ಮತ್ತು ಅವುಗಳ ಸೂಕ್ಷ್ಮ ಕವಲುಗಳು ಗಾಳಿ ತುಂಬಿಕೊಂಡಾಗ ಬೆಳ್ಳಗೆ ಹೊಳೆಯುತ್ತವೆ. ಇವುಗಳ ಒಳಪದರ ಹೊರ ಚರ್ಮದ್ದು; ಈ ಒಳಪದರ ಸುರುಳಿ ಆಕಾರದಲ್ಲಿ ಉಬ್ಬಿಕೊಂಡಿದೆ. ಇದನ್ನು ಸೂಕ್ಷ್ಮದರ್ಶಕದ ಮೂಲಕ ನೋಡಿದಾಗ ನಾಳಗಳ ಸುತ್ತ ಗೆರೆಗಳಿದ್ದಂತೆ ಕಾಣುತ್ತವೆ. ನಾಳಗಳು ಚಪ್ಪಟೆಯಾಗದಂತೆ ಮತ್ತು ಗಾಳಿಸಂಚಾರ ಸರಾಗವಾಗಿ ನಡೆಯಲು ಈ ಸುರುಳಿಗಳು ಉಪಯುಕ್ತವಾಗಿವೆ. ಶ್ವಾಸನಾಳಗಳ ಕವಲುಗಳು ಬರಬರುತ್ತ ಅತ್ಯಂತ ಸೂಕ್ಷ್ಮವಾಗಿ ಅಂಗಾಂಶಗಳನ್ನೆಲ್ಲ ಪ್ರವೇಶಿಸಿ ಕೊನೆಗೆ ಜೀವಕಣಗಳ ಗುಂಪುಗಳ ಮಧ್ಯೆ ಅಂತ್ಯಗೊಳ್ಳುತ್ತದೆ. ಈ ರೀತಿ ದೇಹಾದ್ಯಂತ ಹೊಕ್ಕು, ಜೀವಕಣಗಳಿU
É ನೇರವಾಗಿ ಸ್ವಚ್ಛ ಗಾಳಿಯೊದಗಿಸಿ, ಮಲಿನವಾದ ಗಾಳಿ ಮತ್ತು ನೀರನ್ನು ಹೊರಕ್ಕೆ ಸಾಗಿಸುತ್ತವೆ. ಹಾರುವ ಶಕ್ತಿಯಿರುವ ಕೀಟಗಳಲ್ಲಿ ಕೆಲವು ನಿರ್ದಿಷ್ಟವಾದ ಸ್ಥಳಗಳಲ್ಲಿ ಶ್ವಾಸನಾಳಗಳು ಉಬ್ಬಿಕೊಂಡು ಗಾಳಿಚೀಲಗಳಾಗುವುದುಂಟು. ಇವು ಉಸಿರಾಟಕ್ಕೆ ಸಹಾಯಕವಾಗುವುವಲ್ಲದೆ ಹಾರಾಟದಲ್ಲೂ ಉಪಯುಕ್ತವಾಗಿವೆ.

 ರಕ್ತಪರಿಚಲನಾ ವ್ಯವಸ್ಥೆ: ಕೀಟಗಳ ರಕ್ತಪರಿಚಲನಾ ವ್ಯವಸ್ಥೆಯಲ್ಲಿ ಬೆನ್ನು ಭಾಗದಲ್ಲಿನ ರಕ್ತನಾಳ (ಡಾರ್ಸಲ್ ವೆಸಲ್) ಒಂದೇ ಪ್ರಮುಖ ಭಾಗ. ದೇಹದ ಉಳಿದಭಾಗಗಳಲ್ಲೆಲ್ಲೂ ರಕ್ತನಾಳಗಳಿಲ್ಲ. ರಕ್ತ ಈ ಭಾಗಗಳಲ್ಲಿ ಅಂಗಾಂಗಗಳ ಮಧ್ಯೆ ಮತ್ತು ಕಾಲುಗಳಲ್ಲಿರುವ ಪೊಟರೆಗಳಲ್ಲಿ ಮಾತ್ರ ಚಲಿಸುತ್ತದೆ. ಡಾರ್ಸಲ್ ರಕ್ತನಾಳ ಹಿಂಭಾಗದಲ್ಲಿ ಮುಚ್ಚಿ ಮುಂಭಾಗದಲ್ಲಿ ತೆರೆದಿರುವಂಥ ಕೊಳವೆ. ಇದು ತಲೆಯಿಂದ ಉದರಭಾಗದ ತುದಿಯವರೆಗೂ ಹಬ್ಬಿದೆ. ಇದನ್ನು ಹೃದಯ ಮತ್ತು ಅಯೋರ್ಟ ಎಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ಹೃದಯದಲ್ಲಿ ಸಂಪೀಡಕಗಳಿಂದ ನಿರ್ಮಿತವಾದ ನಿರ್ದಿಷ್ಟ ಸಂಖ್ಯೆಯ ಕೋಣೆಗಳು ಕಂಡುಬರುತ್ತವೆ. ಕೋಣೆಗಳ ಪಕ್ಕದಲ್ಲಿರುವ ಆಸ್ಟಿಯ ಎಂಬ ರಂಧ್ರಗಳ ಮೂಲಕ ಹೃದಯವನ್ನು ಪ್ರವೇಶಿಸಿದ ರಕ್ತ ಮುಂದಕ್ಕೆ ಹರಿದು ಅಯೋರ್ಟ ನಾಳದ ಮುಂದಿನ ದ್ವಾರದಿಂದ ಹೊರಕ್ಕೆ ಬಸಿದು ಅಂಗಾಂಗಗಳನ್ನೆಲ್ಲ ತೊಯಿಸುತ್ತದೆ. ರಕ್ತದಲ್ಲಿ ದ್ರವಭಾಗ ಮತ್ತು ರಕ್ತಕಣಗಳುಂಟು. ದ್ರವಭಾಗ ವರ್ಣರಹಿತವಾಗಿರಬಹುದು. ಇಲ್ಲವೆ ತಿಳಿಹಸಿರು, ಹಳದಿ, ಕಂದು ಬಣ್ಣಗಳಿಂದ ಕೂಡಿರಬಹುದು. ಕೆಂಪು ಬಣ್ಣ ವಿರಳ. ಅಂಗಾಂಶಗಳಿಗೆ ಶ್ವಾಸನಾಳಗಳಿಂದ ನೇರವಾಗಿ ಆಮ್ಲಜನಕ ಸರಬರಾಜು ಆಗುವುದರಿಂದ ರಕ್ತಕ್ಕೆ ಉಸಿರಾಟದ ಜವಾಬ್ದಾರಿ ಅಷ್ಟಾಗಿ ಇಲ್ಲ.

 ವಿಸರ್ಜನಾಂಗಗಳು: ಇವು ದೇಹದ ಅಂಗಾಂಶಗಳಿಗೆ ಒಂದೇ ಸಮವಾದ ಅಂತರ ಪರಿಸ್ಥಿತಿಯನ್ನು ಒದಗಿಸುತ್ತವೆ. ಪ್ರೋಟೀನು ಅಂಶ ಒಡೆದು ಉತ್ಪತ್ತಿ ಯಾಗುವ ಸಾರಜನಕ ಸಂಬಂಧದ ತ್ಯಾಜ್ಯವಸ್ತುಗಳನ್ನು ಹೊರಕ್ಕೆ ತಳ್ಳುವುದು ಈ ಅಂಗಗಳ ಮುಖ್ಯ ಕೆಲಸ. ಮಾಲ್ಪಿಗೀಯನ್ ಕೊಳವೆಗಳು, ಕೊಬ್ಬಿನ ಅಂಗ ಇವೇ ಮುಖ್ಯವಾದ ವಿಸರ್ಜನಾಂಗಗಳು.

 ಮಾಲ್ಪಿಗೀಯನ್ ಕೊಳವೆಗಳು: ಉದ್ದವಾಗಿ ನೂಲಿನಂತಿರುವ ಈ ಕೊಳವೆಗಳು ಒಂದು ಕೊನೆಯಲ್ಲಿ ಕರುಳಿಗೆ ಅಂಟಿಕೊಂಡು ರಕ್ತದಿಂದ ಆವರಿಸಲ್ಪಟ್ಟಿವೆ. ಇವಕ್ಕೆ ಹೊರ ತುದಿಯಲ್ಲಿ (ತೊಟ್ಟಿನಿಂದ ದೂರವಿರುವ ತುದಿ) ರಂಧ್ರವಿಲ್ಲ. ತೊಟ್ಟಿನ ರಂಧ್ರದಿಂದ ಕರುಳಿನ ಒಳಭಾಗಕ್ಕೆ ಸಂಪರ್ಕಹೊಂದಿವೆ. ಒಂದೊಂದು ಕೀಟಜಾತಿಯಲ್ಲೂ ಇವುಗಳ ಸಂಖ್ಯೆ 2ರಿಂದ 200ರ ವರೆಗೆ ವ್ಯತ್ಯಾಸವಾಗುತ್ತದೆ. ಕೆಲವು ಕೀಟ ಪ್ರಬೇಧಗಳಲ್ಲಿ ಇವುಗಳ ಎರಡು ತುದಿಗಳೂ ಹಿಂಗರುಳಿಗೆ ಅಂಟಿಕೊಂಡಿರುವುದುಂಟು. ಇವು ಯೂರಿಕ್ ಆಮ್ಲ ಮುಂತಾದ ಹಾನಿಕಾರವಸ್ತುಗಳನ್ನು ರಕ್ತದಿಂದ ಬೇರ್ಪಡಿಸಿ ಕರುಳಿಗೆ ಸಾಗಿಸುತ್ತವೆ.

 ಕೊಬ್ಬಿನ ಅಂಗ (ಫ್ಯಾಟ್ ಬಾಡಿ): ಅನೇಕ ರೀತಿಯ ವಸ್ತುಗಳನ್ನು ಶೇಖರಿಸಿಟ್ಟುಕೊಳ್ಳಬಲ್ಲ ಜೀವಕಣಗಳಿಂದ ಕೂಡಿದ ನಿರ್ದಿಷ್ಟ ಆಕಾರವಿಲ್ಲದ ಅಂಗ ಇದು. ಇದರಲ್ಲಿ ಸೂಕ್ಷ್ಮವಾದ ಅನೇಕ ಕುಹರಗಳಿವೆ. ಇದರ ಬಣ್ಣ ಬಿಳಿ, ಹಳದಿ, ಕಿತ್ತಳೆ ಅಥವಾ ಹಸಿರು. ಯೂರಿಕ್ ಆಮ್ಲ, ಅದರ ಲವಣಗಳು, ಕ್ಯಾಲ್ಸಿಯಂ ಲವಣಗಳು ಮುಂತಾದುವು. ಕೊಬ್ಬಿನ ಅಂಗದಲ್ಲಿ ಕಂಡುಬರುತ್ತವೆ. ಕೊಬ್ಬಿನ ಅಂಗದ ಮುಖ್ಯ ಕೆಲಸ ಕೊಬ್ಬು, ಸಕ್ಕರೆ, ಪ್ರೋಟೀನ್ ಮೊದಲಾದ ಆಹಾರವಸ್ತುಗಳ ಶೇಖರಣೆ.

 ಗ್ರಂಥಿಗಳು: ಕೀಟಗಳಲ್ಲಿ ಎರಡು ಬಗೆಯ ಗ್ರಂಥಿಗಳಿವೆ. 1 ನಿರ್ದಿಷ್ಟವಾದ ಬಾಯಿ ಅಥವಾ ನಾಳಗಳುಳ್ಳ ಮತ್ತು ಸ್ರವಿಸಿದ ರಸವನ್ನು ದೇಹದ ಹೊರಗೆ ಅಥವಾ ಒಂದು ಅಂಗದೊಳಗೆ ಸೇರಿಸುವ ಗ್ರಂಥಿಗಳು. 2 ಸ್ರವಿಸಿದ ರಸವನ್ನು ರಕ್ತದಲ್ಲಿ ಬೆರೆಸಿ ಅದು ದೇಹಾದ್ಯಂತ ಚಲಿಸುವಂತೆ ಮಾಡುವ ನಾಳರಹಿತ ಗ್ರಂಥಿಗಳು.

 ಚರ್ಮಗ್ರಂಥಿಗಳು, ನಡುಕರುಳಿನ ಗ್ರಂಥಿಗಳು, ಮಾಲ್ಪಿಗೀಯನ್ ಕೊಳವೆಗಳು, ಇವೆಲ್ಲ ನಾಳವುಳ್ಳ ಗ್ರಂಥಿಗಳು. ಇವಲ್ಲದೆ ಕೆಳಗೆ ಹೇಳಿರುವವನ್ನು ಗಮನಿಸಬಹುದು: 1 ಮೇಣಗ್ರಂಥಿಗಳು (ವ್ಯಾಕ್ಸ್ ಗ್ಲಾಂಡ್ಸ್): ಚರ್ಮದ 
ಬೇರೆ ಬೇರೆ ಭಾಗಗಳಲ್ಲಿರುವ ಈ ಗ್ರಂಥಿಗಳು ಸಸ್ಯತಿಗಣೆಗಳಲ್ಲಿ ಹೆಚ್ಚು. ಮೇಣ, ತೆಳ್ಳನೆಯ ಹುಡಿ, ದಾರಗಳ ಗೊಂಚಲು ಅಥವಾ ಹಲಗೆಯ ರೂಪದಲ್ಲಿ ಉತ್ಪತ್ತಿಯಾಗುತ್ತದೆ.

 2 ಅರಗು ಗ್ರಂಥಿಗಳು (ಲ್ಯಾಕ್ ಗ್ಲಾಂಡ್ಸ್): ಅರಗು ಕೀಟ ಮತ್ತು ಅದರ ಸಂಬಂಧಿಗಳಲ್ಲಿ ಇವನ್ನು ಕಾಣಬಹುದು. ರಾಳದಂತಿರುವ ಅರಗಿನ ರಕ್ಷಣಾ ಕವಚವನ್ನು ಹೆಣ್ಣು ಕೀಟ ಸ್ರವಿಸುತ್ತದೆ. ಈ ಗ್ರಂಥಿಗಳು ಚರ್ಮದಲ್ಲಿವೆ.

 3 ಶಿರದ ಗ್ರಂಥಿಗಳು (ಸಿಫ್ಯಾಲಿಕ್ ಗ್ಲಾಂಡ್ಸ್): ದವಡೆ, ಮ್ಯಾಕ್ಸಿಲ ಮತ್ತು ಕೆಳತುಟಿಗೆ ಸೇರಿದ ಗ್ರಂಥಿಗಳು ಇವು. ಕೆಳತುಟಿ ಗ್ರಂಥಿಗಳನ್ನು ಜೊಲ್ಲುಗ್ರಂಥಿಗಳೆಂದೂ ಕರೆಯಬಹುದು. ಇದರ ಸ್ರಾವ ಆಹಾರಸೇವನೆ ಮತ್ತು ಪಚನ ಕ್ರಿಯೆಗೆ ಸಹಾಯಕ.

 4 ರೇಷ್ಮೆ ಗ್ರಂಥಿಗಳು (ಸಿಲ್ಕ್ ಗ್ಲಾಂಡ್ಸ್): ಪತಂಗಗಳ ಗುಂಪಿನಲ್ಲಿ ಕಂಡುಬರುವ ಕೆಳತುಟಿ ಗ್ರಂಥಿಗಳು ಇವು. ಮರಿಕೀಟಗಳ ಕೋಶಗಳ ಗೂಡುಗಳಿಗೆ ಬೇಕಾಗುವ ರೇಷ್ಮೆಯನ್ನೂ ಸ್ರವಿಸುತ್ತವೆ. ರೇಷ್ಮೆ ಸ್ರವಿಸಿದ ಕೂಡಲೆ ಗಾಳಿಗೆ ಸೋಕಿ ಗಡುಸಾದ ಪ್ರೋಟೀನ್ ಎಳೆಯಾಗಿ ಪರಿವರ್ತನೆ ಹೊಂದುತ್ತದೆ.

 5 ಅಸಹ್ಯ ಹುಟ್ಟಿಸುವ ಗ್ರಂಥಿಗಳು (ರಿಪಗ್ನಟೋರಿಯಲ್ ಗ್ಲಾಂಡ್ಸ್): ಅನೇಕ ಕೀಟಗಳಲ್ಲಿ ಚರ್ಮದ ಗ್ರಂಥಿಗಳು ಉತ್ಪಾದಿಸುವ ಕೆಟ್ಟವಾಸನೆಯ ರಸ ಬೇರೆ ಪ್ರಾಣಿಗಳನ್ನು ದೂರವಿಡುವುದರಿಂದ ಆ ಕೀಟಗಳಿಗೆ ರಕ್ಷಣೆ ನೀಡುತ್ತದೆ. ಸಸ್ಯ ತಿಗಣೆಗಳ ದುರ್ವಾಸನೆ ಇದಕ್ಕೆ ಉದಾಹರಣೆ.

 6 ಆಕರ್ಷಕ ಗ್ರಂಥಿಗಳು (ಅಟ್ರ್ಯಾಕ್ಟಂಟ್ ಗ್ಲಾಂಡ್ಸ್): ಅನೇಕ ಪತಂಗಗಳು ಸಂಭೋಗಕ್ಕಾಗಿ ಭಿನ್ನ ಲಿಂಗದ ಕೀಟವನ್ನು ಆಕರ್ಷಿಸುವುದಕ್ಕಾಗಿ ಒಂದು ವಿಶೇಷ ಬಗೆಯ ರಸವನ್ನು ಸ್ರವಿಸುವ ಗ್ರಂಥಿಗಳು.

 7 ವಿಷಗ್ರಂಥಿಗಳು: ಅನೇಕ ಕಣಜಗಳಲ್ಲಿ ಮುಳ್ಳುಕೊಂಡಿ ಅಥವಾ ಬಾಹ್ಯ ಅಂಡೋಪಕರಣಕ್ಕೆ ಸೇರಿದಂತೆ ವಿಷಗ್ರಂಥಿಗಳಿವೆ.

 ನಾಳರಹಿತ ಗ್ರಂಥಿಗಳಲ್ಲಿ ಮುಖ್ಯವಾದುವೆಂದರೆ-1 ಎದೆಯ ಮೊದಲನೆ ಖಂಡದ ಗ್ರಂಥಿಗಳು (ಪ್ರೋಥೊರ್ಯಾಸಿಕ್ ಗ್ಲಾಂಡ್ಸ್). ಇವುಗಳ ರಸದಿಂದ ಎಳೆಹುಳುಗಳು ಸಕಾಲದಲ್ಲಿ ಪೊರೆ ಕಳಚಿ ಬೆಳೆಯಲು ಸಾಧ್ಯವಾಗುತ್ತದೆ. 2 ಕಾರ್ಪೊರ ಅಲ್ಲೇಟ: ಮಿದುಳಿನ ಹಿಂದೆ ಅಯೋರ್ಟ ನಾಳದೊಡನೆ ಸಂಬಂಧ ಹೊಂದಿರುವ ಜೋಡಿ ಗ್ರಂಥಿ. ಎಳೆಹುಳಗಳು ಅಕಾಲದಲ್ಲಿ ಬಲಿತ ಕೀಟಗಳ ಗುಣಗಳನ್ನು ಹೊಂದದಂತೆ ತಡೆಗಟ್ಟಲು ಇದರ ರಸ ಸಹಾಯಕ. 3 ಕಾರ್ಪೊರ ಕಾರ್ಡಿಯಾಕ: ಮಿದುಳಿನ ಕೆಳಗಿದೆ. ಮೊಟ್ಟೆಗಳ ಉತ್ಪಾದನೆಗೆ ಸಹಕಾರಿಯಾದ ರಸವನ್ನು ಸ್ರವಿಸುತ್ತದೆ.

 ಇವಲ್ಲದೆ ಎಪಿಡರ್ಮಿಸ್ ಪದರದ ಕೆಳಗೆ ಒಂದು ಬಗೆಯ ಚರ್ಮಗ್ರಂಥಿಗಳಿವೆ. ಇವು ಫಿರೋಮೋನ್ ಎಂಬ ಹಾರ್ಮೋನನ್ನು ಸ್ರವಿಸುತ್ತವೆ. ಈ ವಸ್ತು ಒಂದು ಕೀಟ ಜಾತಿಯ ಹಲವಾರು ಕೀಟಗಳನ್ನು ಆಕರ್ಷಿಸಿ ಅವು ಸಮುದಾಯಗಳಲ್ಲಿ ವಾಸಮಾಡುವಂತೆ ಪ್ರಚೋದಿಸುತ್ತದೆ.

 ನರಮಂಡಲದ ನಿರ್ದಿಷ್ಟ ಸ್ಥಳಗಳಲ್ಲಿ ನರಕಣಗಳು ಒಟ್ಟುಗೂಡಿ ನರಗ್ರಂಥಿಗಳಾಗುತ್ತವೆ. ಇವುಗಳಿಂದ ಹೊರಬೀಳುವ ಸೂಕ್ಷ್ಮ ಎಳೆಗಳ ಕಟ್ಟುಗಳೇ ನರಗಳು. ನರಮಂಡಲವನ್ನು ಕೇಂದ್ರ ನರವ್ಯೂಹ, ಒಳವಲಯ ನರವ್ಯೂಹ, ಹೊರವಲಯ ನರವ್ಯೂಹ ಎಂದು ಮೂರುಭಾಗಗಳಾಗಿ ವಿಭಾಗಿಸಬಹುದು. ಇವು ಒಂದೊಂದಕ್ಕೂ ನಿಕಟಸಂಬಂಧವಿದೆ.

 1 ಕೇಂದ್ರ ನರವ್ಯೂಹ: ಇದು ನರಗ್ರಂಥಿ ಪಂಕ್ತಿಗಳ ಒಂದು ಜೊತೆ. ಈ ಪಂಕ್ತಿಗಳು ಉದ್ದುದ್ದಕ್ಕೂ ಅಡ್ಡಡ್ಡಕ್ಕೂ ಕೂಡಿಕೊಂಡಿವೆ. ಅಂದರೆ ಒಂದೊಂದು ಗ್ರಂಥಿಯೂ ಪಕ್ಕದ, ಮೇಲಿನ ಮತ್ತು ಕೆಳಗಿನ ಗ್ರಂಥಿಯೊಡನೆ ಸಂಪರ್ಕ ಪಡೆದಿದೆ. ಕೇಂದ್ರ ನರವ್ಯೂಹವನ್ನು ಅನ್ನನಾಳದ ಮೇಲಿನ ಗ್ರಂಥಿ ಅಥವಾ ಮಿದುಳು, ಅನ್ನನಾಳದ ಕೆಳಗಿನ ಗ್ರಂಥಿ ಮತ್ತು ತಳದ ನರಹುರಿ ಎಂದು ವಿಭಾಗಿಸಬಹುದು. ಮಿದುಳಿನಲ್ಲಿ ಭ್ರೂಣಾವಸ್ಥೆಯ ಶಿರದ ಮೊದಲ ಮೂರು ಖಂಡಗಳ ನರಗ್ರಂಥಿಗಳು 
ಸೇರಿವೆ. ಮಿದುಳಿಗೆ ಕಣ್ಣು, ಕುಡಿಮೀಸೆ, ಮೇಲುತುಟಿಗಳೊಡನೆ ಸಂಪರ್ಕ ಉಂಟು. ಅನ್ನನಾಳದ ಕೆಳಗಿನ ಗ್ರಂಥಿ ಶಿರದ ಹಿಂದಿನ ಮೂರು ಖಂಡಗಳ ಗ್ರಂಥಿಗಳಿಂದ ಕೂಡಿದೆ; ದವಡೆ, ಮ್ಯಾಕ್ಸಿಲ ಮತ್ತು ಕೆಳತುಟಿಗಳಿಗೆ ನರಗಳನ್ನು ಒದಗಿಸುತ್ತದೆ. ತಳದ ನರಹುರಿ ಇದೆ ಮತ್ತು ಉದರಗಳ ಕೆಳಭಾಗದ ಮಧ್ಯ ರೇಖೆಯಲ್ಲಿರುವ ಗ್ರಂಥಿಗಳ ಜೋಡಿ ಸರಪಣಿ; ಅನ್ನನಾಳದ ಕೆಳಗಿನ ಗ್ರಂಥಿಯ ಹಿಂಭಾಗಕ್ಕೆ ಅಂಟಿಕೊಂಡಿದೆ. ಎದೆಯಲ್ಲಿ ಮೂರು, ಉದರದಲ್ಲಿ ಖಂಡಗಳ ಸಂಖ್ಯೆಯಷ್ಟು. ಇಲ್ಲವೇ (ಕೆಲವು ಕೂಡಿ ಸಂಯುಕ್ತ ಗ್ರಂಥಿಗಳಾಗಿರುವುದರಿಂದ) ಕಡಿಮೆ ಸಂಖ್ಯೆಯಲ್ಲಿ ಇವೆ. ಎದೆಯ ಗ್ರಂಥಿಗಳು ಕಾಲು ಮತ್ತು ರೆಕ್ಕೆಗಳಿಗೂ ಉದರ ಗ್ರಂಥಿಗಳು ಅಲ್ಲಿನ ಮಾಂಸಖಂಡಗಳಿಗೂ ನರಗಳನ್ನು ಕಳಿಸುತ್ತವೆ.

 2 ಒಳವಲಯ ನರವ್ಯೂಹ: ಇದನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. (i) ಅನ್ನನಾಳದ ಅನುಕಂಪನ ವ್ಯೂಹ. ಇದು ಮುಂಗರುಳು, ನಡುಕರುಳು, ಹೃದಯ-ಈ ಭಾಗಗಳಿಗೆ ನರಸಂಪರ್ಕವನ್ನು ಒದಗಿಸುತ್ತದೆ. (ii) ತಳದ ಅನುಕಂಪನ ವ್ಯೂಹ. ಇದು ಎದೆ ಮತ್ತು ಉದರ ಭಾಗಗಳಲ್ಲಿ ತಳದ ನರಹುರಿಯೊಡನೆ ಸಂಬಂಧ ಹೊಂದಿ ಶ್ವಾಸರಂಧ್ರಗಳಿಗೆ ನರಗಳನ್ನು ಒಯ್ಯುತ್ತವೆ. (iii) ಬಾಲದ ಅನುಕಂಪನ ವ್ಯೂಹ. ತಳದ ನರಹುರಿಯ ಕೊನೆಯ ಸಂಯುಕ್ತ ಗ್ರಂಥಿಯಿಂದ ಕವಲೊಡೆದ ಈ ವ್ಯೂಹ ಜನನಾಂಗಗಳಿಗೂ ಜೀರ್ಣಾಂಗ ವ್ಯವಸ್ಥೆಯ ಹಿಂಭಾಗಕ್ಕೂ ನರ ಸಂಪರ್ಕ ಕಲ್ಪಿಸುತ್ತದೆ.

 3 ಹೊರವಲಯ ನರವ್ಯೂಹ: ಕೇಂದ್ರ ಮತ್ತು ಒಳವಲಯ ನರವ್ಯೂಹಗಳ ಗ್ರಂಥಿಗಳಿಂದ ಹೊರಟು ದೇಹದ ಹೊರ ಮೈಯನ್ನು ಆವರಿಸಿರುವ ನರಗಳು ಈ ಗುಂಪಿಗೆ ಸೇರಿವೆ.

 ಜ್ಞಾನೇಂದ್ರಿಯಗಳು: ಪರಿಸರದ ಬದಲಾವಣೆಗಳ ಅರಿವು ಮೂಡುವಂತೆ ಮಾಡುವುದು ಜ್ಞಾನೇಂದ್ರಿಯಗಳ ಕೆಲಸ. ಬಾಹ್ಯಪರಿಸರದ ವ್ಯತ್ಯಾಸಗಳನ್ನು ನರಸಂಬಂಧದ ಪ್ರಚೋದನೆಯನ್ನಾಗಿ ಪರಿವರ್ತಿಸಿ ಮಿದುಳಿಗೋ ಬೇರೆ ನರಗ್ರಂಥಿಗೋ ತಲಪಿಸುತ್ತವೆ. ಕೀಟಗಳ ಜ್ಞಾನೇಂದ್ರಿಯಗಳನ್ನು ಯಾಂತ್ರಿಕ ಗ್ರಾಹಕಗಳು (ಮೆಕ್ಯಾನೊರಿಸೆಪ್ಟರ್ಸ್), ಶ್ರವಣೇಂದ್ರಿಯಗಳು (ಆಡಿಟರಿ ಆರ್ಗನ್ಸ್). ರಾಸಾಯನಿಕ ಗ್ರಾಹಕಗಳು (ಕೀಮೊರಿಸೆಪ್ಟರ್ಸ್) ಮತ್ತು ನೇತ್ರೇಂದ್ರಿಯಗಳು ಎಂದು ಸ್ಥೂಲವಾಗಿ ವಿಭಾಗಿಸಬಹುದು.

 ಯಾಂತ್ರಿಕ ಗ್ರಾಹಕಗಳು: ಸ್ಪರ್ಶ, ಗಾಳಿ, ನೀರು ಮುಂತಾದವುಗಳ ಹೊಡೆತದಿಂದ ವ್ಯತ್ಯಸ್ಥಗೊಳ್ಳುವುದರ ಮೂಲಕ ನರಗಳನ್ನು ಕೆರಳಿಸುತ್ತವೆ. ದೇಹದ ವಿವಿಧಭಾಗಗಳಲ್ಲಿರುವ ನರಸಂಪರ್ಕವುಳ್ಳ ಕೂದಲುಗಳು ಮುಖ್ಯ ಯಾಂತ್ರಿಕ ಗ್ರಾಹಕಗಳು. ಕುಡಿಮೀಸೆಯ ಮೇಲಿರುವ ಜಾನ್ಸ್‍ಟನ್ಸ್ ಅಂಗ ಎಂಬ ಜ್ಞಾನೇಂದ್ರಿಯ ಸಮತೋಲನೆಯ ವ್ಯತ್ಯಾಸ, ಗಾಳಿಯ ರಭಸ, ಘನವಸ್ತುಗಳ ಸಂಬಂಧ, ನೀರಿನ ಕಂಪನ ಮುಂತಾದ ಬಾಹ್ಯ ಪರಿಸ್ಥಿತಿಗಳ ಅರಿವನ್ನು ನೀಡುತ್ತದೆಂದು ಇಲ್ಲಿ ಗಮನಿಸಬಹುದು.

 ಶ್ರವಣೇಂದ್ರಿಯಗಳು: ಇವುಗಳಿಗೆ ಕರ್ಣಪಟಲ ಅಂಗಗಳೆಂದೂ (ಟಿಂಪಾನಲ್ ಆರ್ಗನ್ಸ್) ಹೆಸರಿದೆ. ಇವು ತೆಳುವಾದ ಹೊರಚರ್ಮದ ಪೊರೆಗಳು; ಜೋಡಿ ಜೋಡಿಯಾಗಿರುತ್ತವೆ. ಇವುಗಳ ಒಳಭಾಗದಲ್ಲಿ ಶ್ರವಣ ನರದ ಸಂಪರ್ಕವುಳ್ಳ ಜ್ಞಾನವಾಹಕ ಕೂದಲುಗಳ ಗೊಂಚಲುಂಟು. ಗಾಳಿಯ ಅಲೆ ಕರ್ಣಪಟಲದ ಪೊರೆಗೆ ಬಡಿದಾಗ ಆ ಪೊರೆ ಅಲುಗಾಡುತ್ತದೆ. ಈ ಅಲುಗಾಟವನ್ನು ಜ್ಞಾನವಾಹಕ ಕೂದಲುಗಳು ಶ್ರವಣನರದ ಮೂಲಕ ಸಂಬಂಧಪಟ್ಟ ನರಗ್ರಂಥಿಗೆ ಮುಟ್ಟಿಸುತ್ತವೆ. ಕರ್ಣಪಟಲ ಅಂಗಗಳು ದೇಹದ ಬೇರೆ ಬೇರೆ ಭಾಗಗಳಲ್ಲಿ ಅಂದರೆ ಎದೆ, ಉದರ ಮುಂಗಾಲುಗಳ ಮೇಲೆ ಇರುವುದುಂಟು.

 ರಾಸಾಯನಿಕ ಗ್ರಾಹಕಗಳು: ಇವು ದೇಹದ ನಾನಾಭಾಗಗಳಲ್ಲಿ ಮುಖ್ಯವಾಗಿ ಕುಡಿಮೀಸೆ, ವದನಾಂಗಗಳ ಕುಚ್ಚುಗಳು (ಪಾಲ್ಪ್ಸ್) ಕಾಲುಗಳ ಮೇಲೆ ಕಂಡುಬರುತ್ತವೆ. ಇವು ಕೂದಲಿನಂತೆಯೊ ತಟ್ಟೆಯಂತೆಯೊ ಇವೆ. ಚರ್ಮದ ಮೇಲೆ ಚಾಚಿಕೊಂಡಿರುವ ಅಥವಾ ಗುಳಿಗಳಲ್ಲಿವೆ. ಇವಕ್ಕೆ ನರಗಳ ಸಂಪರ್ಕವಿದೆ. ರಾಸಾಯನಿಕ 
ಜ್ಞಾನವನ್ನು ಮೂರು ಬಗೆಗಳಾಗಿ ವಿಂಗಡಿಸಬಹುದು. 1 ಉದ್ರೇಕಕಾರಿ ವಸ್ತುಗಳು ಹೆಚ್ಚಾಗಿರುವ ಜಾಗಗಳಿಂದ ದೂರವಿರುವುದು: ಕ್ಲೋರೀನ್, ಅಮೋನಿಯ ಮುಂತಾದ ವಸ್ತುಗಳಿಗೆ ತೋರುವ ಪ್ರತಿಕ್ರಿಯೆ. ಇದಕ್ಕೆ ಸಂಬಂಧಪಟ್ಟ ಗ್ರಾಹಕಗಳು ದೇಹಾದ್ಯಂತವಿವೆಯೆಂದು ಊಹಿಸಲಾಗಿದೆ. 2 ವಾಸನೆ: ವಾಯುವಿನಲ್ಲಿ ಅತ್ಯಲ್ಪಭಾಗದಷ್ಟು ಆವಿ ರೂಪದಲ್ಲಿರುವ ವಸ್ತುಗಳನ್ನೂ ಪತ್ತೆಹಚ್ಚಿ ಅವನ್ನು ಹುಡುಕಿಕೊಂಡು ಹೋಗುವುದು ಅಥವಾ ಅವುಗಳಿಂದ ದೂರ ಸರಿಯುವುದು ಇದೇ ಘ್ರಾಣಶಕ್ತಿ. ಕುಡಿಮೀಸೆ ಮತ್ತು ವದನಾಂಗಗಳ ಕುಚ್ಚುಗಳ ಮೇಲೆ ಘ್ರಾಣಗ್ರಾಹಕ ರೋಮಗಳು ಇರುತ್ತವೆ. 3 ರುಚಿ: ಹೆಚ್ಚು ಪ್ರಮಾಣದಲ್ಲಿ ಕೇಂದ್ರೀಕೃತವಾಗಿರುವ ಉದ್ರೇಕಕಾರಿ ವಸ್ತು ದ್ರವರೂಪದಲ್ಲಿ ಸೂಕ್ತವಾದ ಗ್ರಾಹಕಗಳೊಡನೆ ಸಂಪರ್ಕ ಹೊಂದಿದಾಗ ತೋರುವ ಪ್ರತಿಕ್ರಿಯೆಯೇ ರುಚಿ. ರಸಗ್ರಾಹಕ ರೋಮಗಳು ಕುಡಿಮೀಸೆ, ಬಾಯಿಯ ಒಳಭಾಗ, ವದನಾಂಗಗಳು, ಬಾಹ್ಯ ಅಂಡೋಪಕರಣ, ಮತ್ತು ಕಾಲುಗಳ ಟಾರ್ಸಸ್, ಟಿಬಿಯಗಳ ಮೇಲೆ ಹರಡಿಕೊಂಡಿವೆ.

 ನೇತ್ರೇಂದ್ರಿಯಗಳು: ಕೀಟಗಳಿಗೆ ಬೆಳಕಿನ ಅರಿವು ಸರಳ ಅಕ್ಷಿ ಮತ್ತು ಸಂಯುಕ್ತಾಕ್ಷಿ ಇವುಗಳ ಮೂಲಕ ಆಗುತ್ತದೆ. ಸರಳಅಕ್ಷಿಗಳು ನೆತ್ತಿಯ ಮೇಲ್ಗಡೆ (ಮೂರು) ಮತ್ತು ಪಕ್ಕಗಳಲ್ಲಿ (ಒಂದರಿಂದ ಏಳು) ಇರುತ್ತವೆ. ಅನೇಕ ಕೀಟಗಳ ಪ್ರೌಢಾವಸ್ಥೆಯಲ್ಲಿ ಇವು ಇಲ್ಲ. ಸರಳನೇತ್ರದ ರಚನೆಯಲ್ಲಿ ಮುಖ್ಯ ಭಾಗಗಳಿವು: ಶುಕ್ಲ ಪಟಲ (ಕಾರ್ನಿಯ), ಯವ (ಲೆನ್ಸ್), ಅಕ್ಷಿಪಟ (ರೆಟಿನ), ವರ್ಣಕೋಶಗಳು (ಪಿಗ್ಮೆಂಟ್ ಸೆಲ್ಸ್) ಮತ್ತು ಕೃಷ್ಣಪಟಲ (ಐರಿಸ್). ಚರ್ಮದ ಮೇಲ್ಪೊರೆ ಸರಳಅಕ್ಷಿಯ ಹೊರಸಿಪ್ಪೆಯಾಗಿದ್ದು ಶುಕ್ಲಪಟಲವೆನಿಸಿಕೊಂಡಿದೆ. ಇದು ಸ್ವಲ್ಪ ಉಬ್ಬಿ ದುಂಡನೆಯ ಯವವಾಗಿ ಅದರ ಮೂಲಕ ಬೆಳಕು ಹಾಯುತ್ತದೆ. ಯವದ ಕೆಳಗಡೆ ಇರುವ ದೃಷ್ಟಿಸ್ತಂಭದ (ರ್ಯಾಬ್ಡಮ್) ಸುತ್ತಲೂ ದೃಷ್ಟಿಕೋಶಗಳ (ವಿಶುಯಲ್ ಸೆಲ್ಸ್) ಕಂತೆಯಿಂದ ಕೂಡಿರುವುದೇ ಅಕ್ಷಿಪಟ. ಪ್ರತಿದೃಷ್ಟಿಕೋಶಕ್ಕೂ ದೃಷ್ಟಿನರದ (ಆಪ್ಟಿಕ್ ನರ್ವ್) ಕವಲೊಂದರೊಡನೆ ಸಂಪರ್ಕವಿದೆ. ದೃಷ್ಟಿಕಣಗಳ ಕಂತೆಗಳ ನಡುವೆ ವರ್ಣಕೋಶಗಳಿವೆ. ಕೆಲವು ಕೀಟಗಳಲ್ಲಿ ಯವದ ಅಂಚಿನಿಂದ ಹಿಡಿದು ದೃಷ್ಟಿಕೋಶ ಕೆಳತುದಿಯ ವರೆಗೂ ಇರುವ ದಟ್ಟವಾದ ಬಣ್ಣದ ಹೊದಿಕೆಯೇ ಕೃಷ್ಣಪಟಲ. ಒಂದೊಂದು ಸರಳ ನೇತ್ರವೂ ಒಂದು ಅಸ್ಪಷ್ಟ ಮತ್ತು ತಲೆಕೆಳಗಾದ ಬಿಂಬವನ್ನು ಕೊಡುತ್ತದೆ. ಹೀಗೆ ಸಿಕ್ಕಿದ ಹಲವಾರು ಚಿತ್ರಗಳ ನೆರವಿನಿಂದ ಕೀಟ ಪರಿಸರದಲ್ಲಿ ಅದರ ಸ್ಥಾನವನ್ನೂ ಬೆಳಕು ಕತ್ತಲೆ ಪ್ರದೇಶಗಳನ್ನೂ ಗುರುತಿಸಬಲ್ಲದು.

 ಸಂಯುಕ್ತಾಕ್ಷಿ: ಸರಳಅಕ್ಷಿಗೂ ಸಂಯುಕ್ತಾಕ್ಷಿಗೂ ಮುಖ್ಯ ವ್ಯತ್ಯಾಸವೆಂದರೆ ಸರಳಅಕ್ಷಿಗೆ ಒಂದೇ ಮುಖ (ಫ್ಯಾಸೆಟ್) ಇದ್ದರೆ ಸಂಯುಕ್ತಾಕ್ಷಿಗೆ ಅನೇಕ ಮುಖಗಳು ಇವೆ. ಆದ್ದರಿಂದ ಸಂಯುಕ್ತಾಕ್ಷಿಯನ್ನು ಬಹುಸಂಖ್ಯೆಯ ದೃಷ್ಟಿಅಂಶಗಳ ಸಮಷ್ಟಿ ಎನ್ನಬಹುದು. ಈ ದೃಷ್ಟಿಅಂಶಗಳಿಗೆ ಆಮಟಿಡಿಯ ಎಂದು ಹೆಸರು. ಒಂದು ಸಂಯುಕ್ತಾಕ್ಷಿಯಲ್ಲಿ ಇವುಗಳ ಸಂಖ್ಯೆ 6ರಿಂದ 2,800ವರೆಗೂ ಇರುವುದೆಂದು ಅಂದಾಜು ಮಾಡಲಾಗಿದೆ. ಒಂದು ದೃಷ್ಟಿಅಂಶದಲ್ಲಿ ಈ ಭಾಗಗಳು ಇವೆ. 1 ಶುಕ್ಲಪಟಲ: ಬೆಳಕು ತನ್ಮೂಲಕ ಹಾದುಹೋಗಬಲ್ಲ ಯವವಾಗಿ ಮಾರ್ಪಟ್ಟಿರುವ ಚರ್ಮದ ಮೇಲ್ಪೊರೆ. 2 ಶುಕ್ಲಪಟಲ ಸ್ರವಣಪದರ (ಕಾರ್ನಿಯಾಜೆನ್ ಲೇಯರ್): ಚರ್ಮದ ಕೆಳಪದರದ ಎರಡು ಕಣಗಳು ಮೇಲಿನ ಶುಕ್ಲಪಟಲವನ್ನು ಸ್ರವಿಸುತ್ತವೆ. 3 ಸ್ಫಟಿಕ ಶಂಕುಕೋಶಗಳು (ಕ್ರಿಸ್ಟಲೈನ್ ಕೋನ್ ಸೆಲ್ಸ್): ತನ್ಮೂಲಕ ಬೆಳಕು ಹಾದು ಹೋಗಲುಬಿಡುವ ಸ್ಫಟಿಕಾಕಾರದ ಶಂಕುವೆಂಬ ವಸ್ತುವನ್ನು ಸ್ರವಿಸಬಲ್ಲ ನಾಲ್ಕು ಕೋಶಗಳ ಗುಂಪು. 4 ಕೃಷ್ಣಪಟಲದ ಕೋಶÀಗಳು (ಐರಿಸ್‍ಸೆಲ್ಸ್): ಶುಕ್ಲಪಟಲ ಸ್ರವಣಪದರ ಮತ್ತು ಸ್ಫಟಿಕ ಶಂಕುಕೋಶಗಳ ಸುತ್ತಲೂ ಚಕ್ರಾಕಾರವಾಗಿರುವ ಬಣ್ಣದ ಕೋಶಗಳು. 5 ಸೂಕ್ಷ್ಮ ಅಕ್ಷಿಪಟ (ರೆಟಿನ್ಯುಲ): ದೃಷ್ಟಿ ಅಂಶದ ತೊಟ್ಟಿನಂತಿರುವ ಈ ಭಾಗ ಏಳು ಕಣಗಳಿಂದ ಕೂಡಿದೆ. ಇವೆಲ್ಲ ಸೇರಿ ಮಧ್ಯದಲ್ಲಿ ದೃಷ್ಟಿಸ್ತಂಭವನ್ನು ಸ್ರವಿಸುತ್ತವೆ. ದೃಷ್ಟಿಸ್ತಂಭದ ಬೇರಿನಿಂದ ಹೊರಟ ಸೂಕ್ಷ್ಮ ಎಳೆಗಳು ದೃಷ್ಟಿನರದ 
ಕವಲುಗಳೊಡನೆ ಸಂಪರ್ಕ ಪಡೆದಿವೆ. ಈ ರೀತಿ ಎಲ್ಲ ದೃಷ್ಟಿ ಅಂಶಗಳೂ ಮಿದುಳಿನ ದೃಷ್ಟಿವಿಭಾಗಕ್ಕೆ ಸಂಬಂಧ ಹೊಂದಿವೆ.

 ಕೀಟಗಳ ಸಂಯುಕ್ತಾಕ್ಷಿ ವಸ್ತುಗಳ ರೂಪ ಮತ್ತು ಚಿತ್ರವನ್ನು ಶಬಲ ಖಚಿತ ದೃಷ್ಟಿಯ (ಮೋಸಾóಯಿಕ್ ವಿಷóನ್) ತತ್ತ್ವದ ಮೇಲೆ ನಿರ್ಮಿಸುತ್ತದೆಂದು ವಿಜ್ಞಾನಿಗಳ ಅಭಿಪ್ರಾಯ. ಇದರ ಪ್ರಕಾರ ಒಂದೊಂದು ದೃಷ್ಟಿ ಅಂಶವೂ ತನ್ನ ಯವದ ಮೇಲೆ ಬೀಳುವ ಅಲ್ಪಪ್ರದೇಶದ ಚಿತ್ರವನ್ನು ಮೂಡಿಸುತ್ತದೆ. ಹೀಗೆ ಉಂಟಾದ ಅನೇಕ ಭಿನ್ನ ಭಿನ್ನ ದೃಶ್ಯಗಳೆಲ್ಲ ಕೂಡಿ ಬೆಳಕು ಮತ್ತು ಕಪ್ಪು ಚುಕ್ಕೆಗಳಿಂದ ಕೂಡಿದ ಸಮಗ್ರಚಿತ್ರವಾಗಿ ಪರಿಣಮಿಸುತ್ತದೆ.

ಶಬ್ದ ಮತ್ತು ಬೆಳಕು ಉತ್ಪತ್ತಿಮಾಡುವ ಅಂಗಗಳು: ಅನೇಕ ಕೀಟಗಳಲ್ಲಿ ಶಬ್ದೋತ್ಪತ್ತಿ ಅಂಗಗಳಿವೆ. ಈ ಅಂಗಗಳು ಗಂಡು, ಹೆಣ್ಣುಗಳೆರಡರಲ್ಲಿ ಅಥವಾ ಯಾವುದಾದರೊಂದರಲ್ಲಿ ಮಾತ್ರ ಇರಬಹುದು. ಹೆಣ್ಣು ಗಂಡಿನೊಡನೆ ಕೂಡುವಂತೆ ಆಕರ್ಷಿಸುವುದಕ್ಕೂ ಒಂದು ಜಾತಿಯ ಕೀಟಗಳೆಲ್ಲ ಒಟ್ಟಿಗೆ ಇರುವಂತೆ ಮಾಡಲೂ ಅಪಾಯದ ಸೂಚನೆಯನ್ನು ಕೊಡುವುದಕ್ಕೂ ಸಂರಕ್ಷಣೆಗೂ ಶಬ್ದ ಉಪಯುಕ್ತವಾದುದೆಂದು ತಿಳಿಯಲಾಗಿದೆ. ದೇಹದ ಒಂದು ಭಾಗವನ್ನು ಹೊರವಸ್ತುವಿಗೆ ಬಡಿಯುವುದು, ದೇಹದ ಒಂದು ಭಾಗವನ್ನು ಇನ್ನೊಂದು ಭಾಗಕ್ಕೆ ಉಜ್ಜುವುದು-ಉದಾಹರಣೆಗೆ (ಮಿಡತೆಗಳಲ್ಲಿ ಹಿಂದಿನ ಕಾಲಿನ ಫೀಮರ್ ತುಂಡಿನ ಒಳಮುಖದ ರಚನೆಗಳನ್ನು ಮುಂದಿನ ರೆಕ್ಕೆಗೆ ಉಜ್ಜುವುದು) ರೆಕ್ಕೆಗಳ ಅತಿವೇಗದ ಕಂಪನ (ಸೊಳ್ಳೆ, ನೊಣ), ಮಾಂಸಖಂಡಗಳ ಕ್ರಿಯಾಸಹಾಯ, ಒಂದು ವಿಶೇಷ ಬಗೆಯ ಪೊರೆಯ ಅದಿರುವಿಕೆ (ಗಂಡು ಸಿಕಾಡ ಉದರದ ಪಕ್ಕದ ಮೃದಂಗದಂಥ ಪೊರೆಯೇ ಶಬ್ದೋತ್ಪಾದನೆ ಅಂಗ) ಮುಂತಾದ ವಿಧಾನಗಳಿಂದ ಕೀಟಗಳು ಶಬ್ದ ಮಾಡುತ್ತವೆ.

ಬೆಳಕನ್ನು ಹೊರಸೂಸುವ ಅಂಗಗಳ ಮೂಲಕ, ಅಂಥ ಏಕಾಣು ಜೀವಿಗಳನ್ನು ಹೊಂದಿರುವುದರಿಂದ ಅಥವಾ ಬೆಳಕಿಂದ ಕೂಡಿದ ಆಹಾರ ತಿನ್ನುವುದರಿಂದ ಕೀಟಗಳು ಬೆಳಕನ್ನು ಉತ್ಪತ್ತಿಮಾಡುತ್ತವೆ. ಲೈಂಗಿಕ ಆಕರ್ಷಣೆಯೇ ಬೆಳಕಿನ ಉತ್ಪಾದನೆಯ ಮುಖ್ಯ ಉದ್ದೇಶ. ಮಿಂಚುಹುಳುವಿನಲ್ಲಿ (ಕೋಲಿಯಾಪ್ಟಿರ ಗಣದ ಲ್ಯಾಂಪೈರಿಡಿ ಕುಟುಂಬಕ್ಕೆ ಸೇರಿದೆ) ಉದರದ ಎರಡು ಕಡೆಯಲ್ಲೂ ಸ್ವಯಂಪ್ರಕಾಶಿತ ಅಂಗಗಳಿದ್ದು ಹಳದಿ ಮಿಶ್ರಿತ ಹಸಿರುಬಣ್ಣದ ಬೆಳಕು ಕ್ಷಣಕ್ಕೊಮ್ಮೆ ಕಾಣಿಸಿಕೊಳ್ಳುತ್ತದೆ.

 ಜನನಾಂಗ ವ್ಯವಸ್ಥೆ: ಸಂತಾನಾಭಿವೃದ್ಧಿಗೆ ಸಂಬಂಧಿಸಿದ ಅಂಗಗಳ ರಚನೆಯಲ್ಲಿ ವೈವಿಧ್ಯವನ್ನು ಕಾಣಬಹುದು. ಭ್ರೂಣಾವಸ್ಥೆಯಲ್ಲಿ ಗಂಡುಹೆಣ್ಣುಗಳಿಗೆ ಅಷ್ಟು ವ್ಯತ್ಯಾಸವಿರುವುದಿಲ್ಲ. ಬೆಳೆವಣಿಗೆ ಮುಂದುವರಿದಂತೆ ವ್ಯತ್ಯಾಸಗಳು ಸ್ಪಷ್ಟವಾಗುತ್ತವೆ. ಪ್ರಾರಂಭದಲ್ಲಿ ಜನನ ಗ್ರಂಥಿಗಳು ನಡುಚರ್ಮದ ಒಂದು ಜೊತೆ ಚೀಲಗಳಂತಿರುತ್ತವೆ. ಕೀಟಗಳ ವಿಕಾಸದ ಮೊದಲ ಹಂತದಲ್ಲಿ ಈ ಚೀಲಗಳ ನಾಳಗಳು ಬೇರೆಬೇರೆಯಾಗಿ ದೇಹದ ಹೊರಭಾಗಕ್ಕೆ ತೆರೆದು, ಗಂಡಿನಲ್ಲಿ ರೇತಸ್ಸನ್ನೂ ಹೆಣ್ಣಿನಲ್ಲಿ ಅಂಡವನ್ನೂ ಹೊರದೂಡುತ್ತಿದ್ದವು. ತರುವಾಯ ದೇಹದ ತಳಭಾಗದ ಮಧ್ಯರೇಖೆಯಲ್ಲಿ ಹೊರಚರ್ಮ ಸೀಳಿ ಉಂಟಾದ ಕಾಲುವೆಗೆ (ಹೆಣ್ಣಿನಲ್ಲಿ ಯೋನಿನಾಳ, ಗಂಡಿನಲ್ಲಿ ವೀರ್ಯನಾಳ) ಮೇಲಿನ ಎರಡು ನಾಳಗಳು ಸೇರಿಕೊಂಡು ಒಂದೇ ರಂಧ್ರದ ಮೂಲಕ ತೆರೆಯುವಂತಾಯಿತು. ಈ ಸರಳ ರಚನೆಯ ಜನನೇಂದ್ರಿಯಗಳೊಂದಿಗೆ ಕ್ರಮೇಣ ಅನೇಕ ಸಹಾಯಕ ಗ್ರಂಥಿಗಳೂ ಹೆಣ್ಣು ಕೀಟದಲ್ಲಿ ಒಂದು ಅಥವಾ ಇನ್ನೂ ಹೆಚ್ಚು ರೇತಸ್ಸು ಶೇಖರಿಸುವ ಚೀಲಗಳೂ (ಸ್ಪರ್ಮತೀಕ) ಸಂಭೋಗ ಒರೆಯೂ (ಬರ್ಸ ಕಾಪ್ಯುಲೇಟ್ರಿಕ್ಸ್) ಸೇರಿಕೊಂಡವು.

 ಸಾಮಾನ್ಯವಾಗಿ ಜನನಾಂಗದ ಹೊರ ರಂಧ್ರ ಗಂಡುಕೀಟದಲ್ಲಿ ಶಿಶ್ನದ ತುದಿಯಲ್ಲಿ ಉದರದ ತಳದಲ್ಲಿ 9ನೆಯ ಖಂಡದ ಹಿಂದಿನ ಅಂಚಿನಲ್ಲೂ ಹೆಣ್ಣಿನಲ್ಲಿ 8 ಅಥವಾ 9ನೆಯ ಖಂಡದ ಹಿಂದಿನ ಅಂಚಿನಲ್ಲೂ ಇದೆ.

 

ಹೆಣ್ಣು ಗಂಡು ಕೀಟಗಳಲ್ಲಿ ಜನನೇಂದ್ರಿಯಗಳ ಪಟ್ಟಿ
Uಂಡು

ಹೆಣ್ಣು

1 ಕುಹರಗಳಿಂz ಕೂಡಿದ ಒಂದು ಜೊತೆ ವೃಷಣಗಳು

ಅಂಡೋತ್ಪತ್ತಿಯ ಕೊಳವೆಗಳಿಂz ಕೂಡಿದ ಒಂದು ಜೊತೆ ಅಂಡಾಶಯಗಳು

2 ಒಂದು ಜೊತೆ ರೇತಸ್ಸು ನಾಳ (ವಾಸ ಡಿ¥sgಂಯ

ಒಂದು ಜೊತೆ ಅಂಡನಾಳಗಳು (ಓವಿಡಕ್ಟ್ಸ್)

3 ವೀರ್ಯ ಕೋಶಗಳು (ಸೆಮನಲ್ ವೆಸಿಕಲ್ಸ್)

ಅಂqಕೋಶಗಳು

4 ಮಧ್ಯರೇSಯಲ್ಲಿರುವ ವೀರ್ಯ ಹೊರಹೊಮ್ಮುವ ಕೊಳವೆ

ಯೋನಿನಾಳ

5 ಸಹಾಯಕ ಗ್ರಂಥಿಗಳು

ಸಹಾಯಕ ಗ್ರಂಥಿಗಳು

6 -

ರೇತಸ್ಸು ಉಗ್ರಾಣ (ಸ್ಪರ್ಮತಿP) ಸಂಭೋಗ ಒರೆ (ಬರ್ಸ ಕಾಪ್ಯುಲೇಟ್ರಿಕ್ಸ್)

7 ಬಾಹ್ಯ ಜನನೇಂದ್ರಿಯಗಳು

ಬಾಹ್ಯ ಅಂಡೋಪPgಣ (ಓವಿಪಾಸಿಟರ್)

 

 ಗಂಡುಕೀಟದ ಸಂತಾನೋತ್ಪತ್ತಿ ಅಂಗಗಳು. 1 ವೃಷಣಗಳು: ಇವು ಕರುಳಿನ ಮೇಲ್ಭಾಗ, ತಳಭಾಗ ಅಥವಾ ಪಕ್ಕದಲ್ಲಿವೆ. ಇವುಗಳ ಆಕಾರ ಅಂಡದಂತೆ, ಒಂದೊಂದು ವೃಷಣದಲ್ಲೂ ಕೆಲವು ಫಾಲಿಕಲ್ಸ್ ಅಥವಾ ಹಾಲೆಗಳಿವೆ. ಈ ಫಾಲಿಕಲ್‍ಗಳಲ್ಲಿ ಪ್ರಥಮ ಸ್ಥಿತಿಯ ಬೀಜಾಣುವಿನಿಂದ ಹಿಡಿದು ರೇತ್ರಾಣುಗಳವರೆಗೆ ಬೇರೆ ಬೇರೆ ವಯಸ್ಸಿನ ಕಣಗಳು ನಿರ್ದಿಷ್ಟ ಸ್ಥಳಗಳಲ್ಲಿ ತುಂಬಿರುತ್ತವೆ. ತುಂಬಿರುತ್ತವೆ. 2 ರೇತಸ್ಸು ನಾಳಗಳು : ಇವು ವೀರ್ಯವನ್ನು ವೃಷಣದಿಂದ ಹೊರಕ್ಕೆ ಒಯ್ಯುವ ನಾಳಗಳು. ಇವುಗಳ ಉದ್ದದಲ್ಲಿ ಬಹಳ ವ್ಯತ್ಯಾಸವಿದೆ. ಇವು ಮಾರ್ಗದಲ್ಲಿ ಒಂದುಕಡೆ ಉಬ್ಬಿ ರೇತಸ್ಸಿನ ಶೇಖರಣೆಗಾಗಿ ವೀರ್ಯಕೋಶಗಳಾಗುತ್ತವೆ. ಹಿಂದುಗಡೆ ಎರಡು ನಾಳಗಳೂ ಕೂಡಿ ನಡುರೇಖೆಯ ಒಂಟಿ ಕೊಳವೆಯಾಗಿ, ತುದಿಯಲ್ಲಿರುವ ಹೊರಹೊಮ್ಮುವ ಕೊಳವೆ ಮೂಲಕ ಹೊರಕ್ಕೆ ತೆರೆಯುತ್ತವೆ. 3 ಶಿಶ್ನ: ಬೆರಳಿನಾಕಾರದ ಈ ಭಾಗ ಹೊರಹೊಮ್ಮುವ ಕೊಳವೆಯ ತುದಿಗೆ ಸೇರಿಕೊಂಡಿದೆ. ಹೆಣ್ಣುಕೀಟದ ಬಾಹ್ಯ ಜನನೇಂದ್ರಿಯದೊಳಗೆ ಇದು ಪ್ರವೇಶಿಸಿ ವೀರ್ಯವನ್ನು ಇಡುತ್ತದೆ. ಒಂದರಿಂದ ಮೂರು ಜೊತೆ ಸಹಾಯಕ ಗ್ರಂಥಿಗಳು ರೇತಸ್ಸು ನಾಳಗಳೊಡನೆ ಸೇರಿಕೊಂಡಿವೆ. ಇವು ಚೀಲದಂತೆ ಅಥವಾ ನಾಳದಂತೆ ಇವೆ. ಇವುಗಳ ಸ್ರಾವ ವೀರ್ಯದೊಂದಿಗೆ ಮಿಶ್ರವಾಗುತ್ತದೆ.

 ಹೆಣ್ಣು ಕೀಟದ ಸಂತಾನಾಭಿವೃದ್ಧಿ ಅಂಗಗಳು. 1 ಅಂಡಾಶಯಗಳು: ಕರುಳಿನ ಎರಡು ಪಕ್ಕಗಳಲ್ಲಿ ಇರುವ ಸಾಂದ್ರವಾದ ಅಂಗಗಳು. ಪ್ರತಿ ಅಂಡಾಶಯವೂ ನಿರ್ದಿಷ್ಟ ಸಂಖ್ಯೆಯ ಅಂಡೋತ್ಪತ್ತಿನಾಳಗಳಿಂದ ಕೂಡಿದ್ದು. ಎಲ್ಲವೂ ಅಂಡನಾಳದೊಳಕ್ಕೆ ತೆರೆಯುತ್ತವೆ. ಒಂದೊಂದು ಅಂಡಾಶಯದಲ್ಲಿ ಅಂಡೋತ್ಪತ್ತಿ ನಾಳಗಳ ಸಂಖ್ಯೆ ಎಂಟಕ್ಕಿಂತ ಹೆಚ್ಚಾಗಿಲ್ಲ. ಅಂಡೋತ್ಪತ್ತಿನಾಳ ಉದ್ದವಾದ ಕೊಳವೆಯಂತಿದ್ದು. ಅದರೊಳಗೆ ಬೆಳೆಯುತ್ತಿರುವ ಮೊಟ್ಟೆಗಳ ಸಾಲು ಇರುತ್ತವೆ. ಇಂಥ ಸಾಲಿನಲ್ಲಿ ಅತ್ಯಂತ ಪಕ್ವವಾದ ಮೊಟ್ಟೆಗಳು ನಾಳದ ಕೆಳತುದಿಯಲ್ಲಿ ಅಂದರೆ ಅಂಡನಾಳವನ್ನು ಸೇರುವ ತುದಿಯಲ್ಲಿರುತ್ತವೆ. ಅಂಡೋತ್ಪತ್ತಿನಾಳದ ಮೇಲು ತುದಿಯಲ್ಲಿ ಸೂಕ್ಷ್ಮವಾದ ಎಳೆಯುಂಟು. ಒಂದು ಅಂಡಾಶಯದ ನಾಳಗಳ ಎಳೆಗಳೆಲ್ಲ ಸೇರಿ ಹುರಿಯಾಗಿ, ಪಕ್ಕದ ಅಂಡಾಶಯದ ಹುರಿಯೊಡನೆ ಕೂಡಿ ನಡುರೇಖೆಯ ಹುರಿಯಾಗುತ್ತದೆ. ನಾಳದ ಮೇಲ್ಭಾಗದಲ್ಲಿ ಮೂಲ ಸ್ಥಿತಿಯ ಬೀಜಾಣುಗಳೂ ಪೋಷಕಕಣಗಳೂ ಕೆಳಗಡೆ ಬೆಳೆಯುತ್ತಿರುವ ಅಂಡಗಳೂ ಪೋಷಕ ಕಣಗಳೂ ತುಂಬಿವೆ. 2 ಅಂಡನಾಳಗಳು: ಒಂದೊಂದು ಅಂಡಾಶಯದಿಂದ ಹಿಂದಿನಿಂದ ಹೊರಟ ಅಂಡನಾಳವೂ ತನ್ನ ಪಕ್ಕದ ನಾಳದೊಡನೆ ಕೂಡಿ, ಉದರದ 7ನೆಯ ಖಂಡದ ಕೆಳಚಿಪ್ಪಿನ ಹಿಂದೆ ಇರುವ
ಅಂಡನಾಳವನ್ನು ಸೇರುತ್ತದೆ. ಈ ನಾಳ 8ನೆಯ ಖಂಡಕ್ಕೂ ವ್ಯಾಪಿಸಿ ಅಲ್ಲಿ ಒಳಮಡಿಕೆಯಂತೆ ಉದ್ಭವಿಸುವ ಯೋನಿಯನ್ನು ಕೂಡಿಕೊಳ್ಳುತ್ತದೆ. ಸಂಭೋಗ ಒರೆ ಯೋನಿಪ್ರದೇಶದಲ್ಲಿ ಒಂದು ಚೀಲದಂತಿದೆ. ಹಲವಾರು ರೂಪಗಳುಳ್ಳ ವೀರ್ಯಸಂಗ್ರಹಣಚೀಲ ಯೋನಿ ಅಥವಾ ಜನನ ಕುಳಿಯೊಡನೆ ತನ್ನ ನಾಳದ ಮೂಲಕ ಸಂಪರ್ಕ ಹೊಂದಿದೆ. ಅನೇಕ ಬಗೆಯ ಕೀಟಗಳು ತಮ್ಮ ಜೀವಮಾನದಲ್ಲಿ ಒಂದೇ ಸಲ ಸಂಭೋಗ ಮಾಡುವುವಾದರೂ ದೀರ್ಘಕಾಲ ಮೊಟ್ಟೆ ಇಡುವುದರಿಂದ ವೀರ್ಯ ಶೇಖರಣೆ ಅಗತ್ಯ. 3 ಸಹಾಯಕ ಗ್ರಂಥಿಗಳು: ಒಂದೆರಡು ಜೊತೆ ಗ್ರಂಥಿಗಳು ಯೋನಿಯ ಕೆಳತುದಿಯಲ್ಲಿ ತೆರೆಯುತ್ತವೆ. ತತ್ತಿಗಳನ್ನು ಗುತ್ತಿಗಳಾಗಿ ಕೂಡಿಸುವುದಕ್ಕೂ ಅವುಗಳನ್ನು ಇಡುವ ಜಾಗಕ್ಕೆ ಅಂಟಿಸುವುದಕ್ಕೂ ಇವುಗಳ ಸ್ರಾವ ಉಪಯುಕ್ತವಾಗಿದೆ.

 ಕೀಟಗಳ ಮೊಟ್ಟೆ : ಮೊಟ್ಟೆಯ ಕೋಶದ್ರವ್ಯ ಬಲೆಯಂತಿದ್ದು, ಅದರ ಮಧ್ಯದಲ್ಲಿ ದೊಡ್ಡ ನ್ಯೂಕ್ಲಿಯಸ್ ಮತ್ತು ಹೇರಳವಾಗಿ ಬಂಡಾರ ಗುಳ್ಳೆಗಳು ಇವೆ. ಅಂಡದ ಸುತ್ತ ತೆಳ್ಳನೆಯ ಸಜೀವ ಪೊರೆ (ವಿಟೆಲೈನ್ ಪೊರೆ) ಮತ್ತು ಅದರ ಹೊರಗೆ ಚಿಪ್ಪು (ಕೋರಿಯಾನ್) ಇವೆ. ಚಿಪ್ಪು ಗಡುಸಾಗಿರುವುದರಿಂದ ಮೊಟ್ಟೆಗೆ ನಿರ್ದಿಷ್ಟ ಆಕಾರವಿರುತ್ತದೆ. ಚಿಪ್ಪಿನ ಮೇಲ್ಮೈಯಲ್ಲಿ ಅನೇಕ ಬಗೆಯ ಕೆತ್ತನೆಗಳು-ಹೆಚ್ಚಾಗಿ ಆರು ಮೂಲೆಯ ಚಿತ್ರಗಳು-ಇರುತ್ತವೆ. ಮೊಟ್ಟೆಗೆ ಉದ್ದವಾದ ಅಂಡಾಕಾರವೇ ಸಾಮಾನ್ಯ. ಗೋಳಾಕಾರ, ತಟ್ಟೆ, ಪೀಪಾಯಿ ಆಕಾರಗಳೂ ಉಂಟು. ಒಂದು ಕೊನೆಯಲ್ಲಿ ತೊಟ್ಟು ಮತ್ತು ಮೇಲ್ತುದಿಯಲ್ಲಿ ಮುಚ್ಚಳ ಇರುವುದೂ ಉಂಟು. ಚಿಪ್ಪಿನಲ್ಲಿ ಎರಡು ಪದರಗಳುಂಟು. ಹೊರಪದರ ತೆಳುವಾದ ಎಕ್ಸೊಕೋರಿಯಾನ್, ಒಳಪದರ ದಪ್ಪವಾದ ಎಂಡೊಕೋರಿಯಾನ್, ಹೊರಗಿನ ಪದರ ಕೈಟಿನ್‍ನಂಥ ಸೀರೋಪ್ರೋಟೀನ್ ಅಥವಾ ಕೋರಿಯಾನ್‍ನಿಂದ ಕೂಡಿದೆ. ಮೊಟ್ಟೆ ಚಿಕ್ಕದಿದ್ದು ಇನ್ನೂ ಹೆಣ್ಣಿನ ಶರೀರದಲ್ಲಿದ್ದಾಗ ಮೊಟ್ಟೆಯ ಒಂದು ಕಡೆ ಒಂದು ಸೂಕ್ಷ್ಮವಾದ ರಂಧ್ರವಿರುತ್ತದೆ. ಇದಕ್ಕೆ ಮೈಕ್ರೊಪೈಲ್ ಎಂದು ಹೆಸರು. ಇದರ ಮೂಲಕ ವೀರ್ಯಾಣು ಒಳಹೋಗಬಲ್ಲುದು. ಕೀಟಗಳ ಮೊಟ್ಟೆಗಳು ಅತ್ಯಂತ ಸಣ್ಣಗಾತ್ರದವು. 0.1 ಮಿಮೀ. ನಿಂದ ಹಿಡಿದು 5-6 ಮಿಮೀ. ಉದ್ದವಿರುವುದೇ ಸಾಮಾನ್ಯ.

 ಸಂತಾನೋತ್ಪತ್ತಿಯ ವಿಧಾನಗಳು: ಹೆಣ್ಣುಕೀಟ ಗರ್ಭಾಂಕುರಗೊಂಡ ಅಂಡವನ್ನು ಹೊರಗಡೆ ಇಟ್ಟು, ಕಾಲಕ್ರಮದಲ್ಲಿ ಅದು ಒಡೆದು, ಮರಿಹುಟ್ಟುವುದೇ ಸಾಮಾನ್ಯ ಪದ್ಧತಿ. ಬೇರೆ ಕೆಲವು ವಿಧಾನಗಳನ್ನು ವಿರಳವಾಗಿ ಕಾಣಬಹುದು. 1 ಮರಿ ಜನನ (ವೈವಿಪ್ಯಾರಿಟಿ): ನೇರವಾಗಿ ಮರಿಗಳು ತಾಯಿಕೀಟದ ದೇಹದಿಂದ ಹುಟ್ಟುವುದು. ಉದಾ: ಏಫಿಡ್ ಜಾತಿಯ ಸಸ್ಯಹೇನುಗಳು. 2 ಪಿತೃರಹಿತ ಸಂತಾನ (ಪಾರ್ಥೆನೊಜೆನಿಸಿಸ್): ಕೆಲವು ಕೀಟ ಜಾತಿಗಳಲ್ಲಿ ಗಂಡುಕೀಟಗಳೇ ಕಂಡು ಬಂದಿಲ್ಲ. ಇನ್ನು ಕೆಲವು ಕೀಟಗಳಲ್ಲಿ ಗಂಡು ಅಪೂರ್ವ. ಆದರೂ ಸಂತಾನವೃದ್ಧಿ ಕಂಡುಬರುತ್ತದೆ. ಈ ರೀತಿ ಹುಟ್ಟಿದ ಕೀಟಗಳು ಎರಡು ಲಿಂಗಗಳಿಗೂ ಸೇರಿರಬಹುದು ಅಥವಾ ಬರಿಗಂಡು, ಬರಿಹೆಣ್ಣು ಕೀಟಗಳಾಗಬಹುದು. 3 ಬಾಲ್ಯ ಸಂತಾನ (ಪೀಡೋಜೆನಿಸಿಸ್): ಮರಿಗಳ ಅಂಡಾಶಯಗಳು ಪಕ್ವಸ್ಥಿತಿಗೆ ಬಂದು ಗಂಡಿನ ಸಂಪರ್ಕವಿಲ್ಲದ ಸಂತಾನೋತ್ಪತ್ತಿ; ಉದಾ: ಸೆಸಿಡೋಮೈಯಿಡ್ ನೊಣಗಳು 4 ಬಹುಭ್ರೂಣತ್ವ (ಪಾಲಿಎಂಬ್ರಿಯಾನಿ): ಒಂದು ಮೊಟ್ಟೆಯಿಂದ ಒಂದಕ್ಕೂ ಹೆಚ್ಚು ಭ್ರೂಣಗಳ ಉತ್ಪತ್ತಿ. ಉದಾ: ಕೆಲವು ಪರಾವಲಂಬಿ ಕಣಜಗಳು. 5 ದ್ವಿಲಿಂಗತ್ವ (ಹರ್ಮಫ್ರಡಿಟಿಸಮ್): ಒಂದೇ ಕೀಟದಿಂದ ಅಂಡ ಹಾಗೂ ವೀರ್ಯೋತ್ಪಾದನೆ. ಇದು ಅತ್ಯಂತ ವಿರಳ. ಉದಾಹರಣೆಗೆ ಐಸೀರಿಯ ಪರ್ಚೇಸಿ ಎಂಬ ಸಸ್ಯತಿಗಣೆ ಮೊಟ್ಟೆ, ವೀರ್ಯ ಎರಡನ್ನೂ ಉತ್ಪಾದಿಸಬಲ್ಲುದು.

 ಬೆಳೆವಣಿಗೆ ಮತ್ತು ರೂಪಪರಿವರ್ತನೆ (ಮೆಟಮಾರ್ಫಾಸಿಸ್): ಮರಿಗಳ ಬೆಳೆವಣಿಗೆಗೆ ಅನುಕೂಲವಾಗಿರುವ ಸ್ಥಳಗಳಲ್ಲೇ ಸಾಮಾನ್ಯವಾಗಿ ಕೀಟಗಳು ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳನ್ನು ಒಂಟೊಂಟಿಯಾಗಿ ಇಲ್ಲವೆ ಗುಂಪು ಗುಂಪಾಗಿ, ಮರಿಗಳು ತಿನ್ನುವ ಎಲೆಗಳ ಮೇಲೆ ಅಥವಾ ಕಾಂಡ ಮುಂತಾದ ಭಾಗಗಳ ಬಿರುಕುಗಳಲ್ಲಿ ಇಡುತ್ತವೆ. ಸಸ್ಯದಲ್ಲಿ ಸ್ವಲ್ಪ ಆಳವಾಗಿ ಮೊಟ್ಟೆ ಇಟ್ಟಾಗ ಗಂಟುಗಳು ಉಂಟಾಗುವುದುಂಟು. ಒಂದು ಜಾಗಕ್ಕೆ ಮೊಟ್ಟೆಗಳನ್ನು ಅಂಟಿಸುವುದೂ ಪೊರೆ ಅಥವಾ
(ಎಕ್ಸೊಟೆರಿಗೋಟ) ಕೀಟಗಳು ಸಾಮಾನ್ಯವಾಗಿ ಅಪೂರ್ಣಪರಿವರ್ತಿಗಳು. ಇವುಗಳಲ್ಲಿ ನೇರ ಅಥವಾ ಸರಳ ರೂಪಪರಿವರ್ತನೆಯನ್ನು ಕಾಣಬಹುದು. ಇವುಗಳಲ್ಲಿ ಕೋಶಾವಸ್ಥೆ ಇಲ್ಲ. ಮರಿಕೀಟಕ್ಕೆ ಅಪ್ಸರೆ (ನಿಂಫ್) ಎಂದು ಹೆಸರು. ಅಪ್ಸರೆಯಲ್ಲಿ ರೆಕ್ಕೆ ಮತ್ತು ಸಂತಾನೋತ್ಪತ್ತಿಯ ಅಂಗಗಳು ಅಪೂರ್ಣಾವಸ್ಥೆಯಲ್ಲಿರುತ್ತವೆ. ಇದು ಗಾತ್ರದಲ್ಲಿ ಪ್ರೌಢಕೀಟಕ್ಕಿಂತ ಚಿಕ್ಕದು. ದೇಹದ ಆಕಾರ, ವದನಾಂಗ ಮತ್ತು ಸಂಯುಕ್ತ ನೇತ್ರಗಳ ರಚನೆ ಹಾಗೂ ದೈಹಿಕ ಕ್ರಿಯೆಗಳಲ್ಲಿ ಮರಿಗೂ ಪ್ರೌಢಕೀಟಕ್ಕೂ ವ್ಯತ್ಯಾಸವಿಲ್ಲ. ಅಪ್ಸರೆ ನಿರ್ದಿಷ್ಟವಾದ ಅಂತರಗಳಲ್ಲಿ ಪೊರೆ ಕಳಚಿ, ಮೈಗಾತ್ರವನ್ನು ಹೆಚ್ಚಿಸಿಕೊಳ್ಳುತ್ತದೆ.

 ಉನ್ನತ ವರ್ಗಕ್ಕೆ ಸೇರಿದ ಅಥವಾ ದೇಹದೊಳಗಿನಿಂದ ಹುಟ್ಟುವ ರೆಕ್ಕೆಗಳುಳ್ಳ ಅಂತರೋದ್ಭವ ಪಕ್ಷಕ (ಎಂಡೋಟೆರಿಗೋಟ) ಕೀಟಗಳು ಪೂರ್ಣಪರಿವರ್ತಿಗಳು. ಮೊಟ್ಟೆಯೊಡೆದು ಬಂದ ಮರಿಗೂ ಪ್ರೌಢ ಕೀಟಕ್ಕೂ ಆಕಾರ ಮತ್ತು ದೇಹರಚನೆಯಲ್ಲಿ ಬಹಳ ವ್ಯತ್ಯಾಸಗಳುಂಟು. ಮರಿಗಳಲ್ಲಿ ಸಂಯುಕ್ತನೇತ್ರಗಳು ಇಲ್ಲವೇ ಇಲ್ಲ ಅಥವಾ ಇದ್ದರೂ ಅವು ಉಪಯುಕ್ತವಲ್ಲ. ಈ ವರ್ಗದ ಮರಿ ಕೀಟಗಳನ್ನು ಡಿಂಭಗಳು (ಲಾರ್ವೆ) ಎಂದು ಕರೆಯಲಾಗುತ್ತದೆ. ಇವುಗಳ ಜೀವಮಾನದಲ್ಲಿ ನಿರ್ದಿಷ್ಟ ಸಂಖ್ಯೆಯ ಅಂತರ ಕಾಲಗಳೂ, ಪೊರೆ ಬಿಡುವಿಕೆಯೂ ಕಂಡುಬರುತ್ತದೆ. ಪೂರ್ತಿ ಬೆಳೆದ ಡಿಂಭ ಕೋಶಾವಸ್ಥೆಯ (ಪ್ಯೂಪ) ಮೂಲಕ ಪ್ರೌಢ ಕೀಟವಾಗಿ ಪರಿವರ್ತನೆ ಹೊಂದುತ್ತದೆ. ಈ ವಿಧಾನದ ರೂಪಪರಿವರ್ತನೆಯನ್ನು ಸಂಪೂರ್ಣ ಪರಿವರ್ತನೆ ಎನ್ನಲಾಗುತ್ತದೆ.

 1 ಮೂಲಪಾದಿ ಡಿಂಭ (ಪ್ರೋಟೋಪಾಡ್ ಲಾರ್ವ): ಭ್ರೂಣಾವಸ್ಥೆಯಲ್ಲೇ ಮೊಟ್ಟೆಯೊಡೆದು ಹೊರ ಬಂದು ಆತಿಥೇಯ ಕೀಟಗಳ ದೇಹಗಳೊಳಗೆ ಜೀವಿಸುವ ಹೈಮೆನಾಪ್ಟಿರ ವರ್ಗಕ್ಕೆ ಸೇರಿದ ಪರಾವಲಂಬಿ ಕಣಜಗಳಲ್ಲಿ ಇವು ಹೆಚ್ಚಾಗಿ ಕಾಣಬರುತ್ತವೆ. ಸಾಮಾನ್ಯವಾಗಿ ಇವುಗಳಲ್ಲಿ ಕಾಲುಗಳು ಅಷ್ಟಾಗಿ ವಿಕಾಸಹೊಂದಿರುವುದಿಲ್ಲ.

 2 ಬಹುಪಾದಿ ಡಿಂಭ (ಪಾಲಿಪಾಡ್ ಲಾರ್ವ): ದೇಹ ಖಂಡಗಳಾಗಿ ಸ್ಪಷ್ಟವಾಗಿ ವಿಭಾಗವಾಗಿದೆ. ಉದರದ ಖಂಡಗಳಿಗೆ ಅಂಟಿಕೊಂಡ ಕಾಲುಗಳಿವೆ. ದೇಹದ ಎರಡು ಪಕ್ಕಗಳಲ್ಲೂ ಸಾಲಾಗಿ ಶ್ವಾಸದ್ವಾರಗಳಿವೆ. ಕುಡಿಮೀಸೆ ಮತ್ತು ಎದೆಯ ಭಾಗದ ಕಾಲುಗಳು ಇರುವುವಾದರೂ ಅಷ್ಟಾಗಿ ಬೆಳೆದಿಲ್ಲ. ಡಿಂಭಗಳು ತಮ್ಮ ಆಹಾರದ ಸಮೀಪದಲ್ಲೇ ಇರುತ್ತವೆ ಮತ್ತು ಸ್ವಲ್ಪ ಜಡಸ್ವಭಾವದವು. ಉದಾಹರಣೆ: ಲೆಪೆಡಾಪ್ಟಿರ ಗಣದ ಕೀಟಗಳು ಮತ್ತು ಸಾಫ್ಲೈ.

 3 ಮಿತಪಾದಿ ಡಿಂಭ (ಅಲೆಗೋಪಾಡ್ ಲಾರ್ವ): ಇವುಗಳಲ್ಲಿ ತಕ್ಕಮಟ್ಟಿಗೆ ಬೆಳೆದ ಎದೆಯ ಕೀಲು ಕಾಲುಗಳಿವೆ. ದೇಹದ ಹಿಂದಿನ ತುದಿಯಲ್ಲಿ ಒಂದು ಜೊತೆ ಚಿಮಟದಂಥ ರಚನೆಗಳಿವೆ. ಉದರ ಭಾಗದಲ್ಲಿ ಇನ್ಯಾವ ಉಪಾಂಗಗಳೂ ಇಲ್ಲ. ತಲೆ ಮತ್ತು ಅದರ ಉಪಾಂಗಗಳು ಚೆನ್ನಾಗಿ ಬೆಳೆದಿವೆ. ಉದಾಹರಣೆ: ನ್ಯೂರಾಪ್ಟಿರ ಮತ್ತು ಕೋಲಿಯಾಪ್ಟಿರ.

 4 ಅಪಾದಿ ಡಿಂಭ (ಏಪೋಡಸ್ ಲಾರ್ವ): ಎದೆ ಮತ್ತು ಉದರಗಳು ಸಂಪೂರ್ಣವಾಗಿ ಉಪಾಂಗರಹಿತವಾಗಿವೆ. ಕೋಲಿಯಾಪ್ಟಿರ, ಹೈಮೆನಾಪ್ಟಿರ ಗಣಗಳ ಅನೇಕ ಕುಟುಂಬಗಳ ಮತ್ತು ಡಿಪ್ಟಿರ ಗಣದ ಕೀಟಗಳಲ್ಲಿ ಈ ಬಗೆಯ ಡಿಂಭಗಳನ್ನು ಕಾಣಬಹುದು.

 ಸಾಮಾನ್ಯವಾಗಿ ಲೆಪಿಡಾಪ್ಟಿರ ಗಣದ ಡಿಂಭಗಳನ್ನು ಕಂಬಳಿಹುಳು (ಕ್ಯಾಟರ್ ಪಿಲರ್) ಎಂದೂ ಕೋಲಿಯಾಪ್ಟಿರ ಗಣದ ಡಿಂಭಗಳನ್ನು ಗ್ರಬ್ ಎಂದೂ ಡಿಪ್ಟಿರ ಗಣದ ಡಿಂಭಗಳನ್ನು ಮ್ಯಾಗಟ್ ಎಂದೂ ಕರೆಯುವುದು ವಾಡಿಕೆ.

 ಪೊರೆಬಿಡುವಿಕೆ (ಮೋಲ್ಟಿಂಗ್): ತಮ್ಮ ಬೆಳೆವಣಿಗೆಯ ಫಲವಾಗಿ ಕೀಟಗಳು ಗಾತ್ರದಲ್ಲಿ ಹೆಚ್ಚುತ್ತ ಹೋಗುತ್ತವೆ. ಆದರೆ ಈ ಹೆಚ್ಚಳಕ್ಕೆ ಅನುಗುಣವಾಗಿ ಕೀಟಗಳ ಗಡಸು ಧರ್ಮ ಹೊಂದಿಕೊಳ್ಳದೆ ಆಗಾಗ ಪೊರೆಯಂತೆ ಉದುರಿ ಹೋಗುತ್ತದೆ. ಇದರೊಂದಿಗೆ ಶ್ವಾಸನಾಳ, ಮುಂಗರುಳಿನ ಮತ್ತು ಹಿಂಗರುಳಿನ ಒಳಪದರಗಳೂ ಕಳಚಿ ಬೀಳುತ್ತವೆ. ಇದೇ ಪೊರೆಬಿಡುವಿಕೆ, ಪೊರೆಬಿಡುವಿಕೆಯಲ್ಲಿ ಒಳಚರ್ಮ ಸಂಕುಚಿತವಾಗಿ ಹೊರಚರ್ಮ ಸಿಪ್ಪೆಯಂತೆ ಅಳ್ಳಕವಾಗುತ್ತದೆ. ಮತ್ತು ಚರ್ಮದ ಈ ಎರಡು ಪದರಗಳ ನಡುವೆ ಒಂದು ಬಗೆಯ ದ್ರವ ತುಂಬಿಕೊಳ್ಳುತ್ತದೆ. ಈ ದ್ರವ ಹೊರ ಚರ್ಮದ ಒಳಮೈಯನ್ನು ಕರಗಿಸುತ್ತದೆ. ಒಳ ಚರ್ಮದ ಮೇಲ್ಭಾಗದಲ್ಲಿ ಹೊಸ 
ಚÀರ್ಮ ಸ್ರವಿಸಲ್ಪಟ್ಟ ತರುವಾಯ ಕೀಟ ಹಳೆಚರ್ಮವನ್ನು ಸೀಳಿಕೊಂಡು ಹೊರಬೀಳುತ್ತದೆ.

 ಬೆಳೆವಣಿಗೆ: ಕೀಟಗಳು ಅತ್ಯಂತ ಗಮನಾರ್ಹವಾದ ರೀತಿಯಲ್ಲಿ ಬೆಳೆಯುತ್ತ ಹೋಗುತ್ತವೆ. ಇವುಗಳ ಬೆಳೆವಣಿಗೆಯ ದರವೂ ಹೆಚ್ಚು. ಅನೇಕ ಪೂರ್ಣ ಪರಿವರ್ತಿಗಳಲ್ಲಿ ಬೆಳೆವಣಿಗೆಯ ತೀವ್ರತೆಯನ್ನೂ ಗಾತ್ರದ ಹೆಚ್ಚಳದ ಪ್ರಮಾಣವನ್ನೂ ಅಂದಾಜು ಮಾಡಬಹುದು. ರೇಷ್ಮೆ ಹುಳುವಿನ ಪ್ರೌಢಕೀಟ ಮೊಟ್ಟೆಯಿಂದ ಬಂದ ಮರಿಹುಳದ 9,100ರಿಂದ 10,500ರಷ್ಟು ಪಾಲು ತೂಕವಿರುತ್ತದಂತೆ; ಕಾಸಸ್ ಕಾಸಸ್ ಎಂಬ ಪತಂಗದಲ್ಲಿ ಈ ಪ್ರಮಾಣ 72,000ದಷ್ಟು..

 ಡೈಯರ್ ಎಂಬ ವಿಜ್ಞಾನಿಯ ಪ್ರಕಾರ ಒಂದೊಂದು ಅಂತರ ಕಾಲಕ್ಕೂ ತಲೆಯ ಅಡ್ಡಗಲ 1.4 ರಷ್ಟು ಪ್ರಮಾಣದಲ್ಲಿ ಹೆಚ್ಚುತ್ತ ಹೋಗುತ್ತದೆ. ಇದರಂತೆಯೇ ಕೀಟದ ಉದ್ದದ ಹೆಚ್ಚಳವೂ ಒಂದು ನಿರ್ದಿಷ್ಟ ಪ್ರಮಾಣದಲ್ಲಿ ನಡೆಯುತ್ತದೆ ಎಂದು ತಿಳಿದುಬಂದಿದೆ.

 ಕೋಶ (ಪ್ಯೂಪ): ಪೂರ್ಣ ಪರಿವರ್ತಿಕೀಟಗಳ ಬೆಳೆವಣಿಗೆಯಲ್ಲಿನ ಸುಪ್ತಾವಸ್ಥೆಯ ಕಾಲಕ್ಕೆ ಕೋಶವೆಂದು ಹೆಸರು. ಈ ಅವಧಿಯಲ್ಲಿ ಆಹಾರ ಸೇವನೆಯಾಗಲಿ ಚಲನವಲನಗಳಾಗಲಿ ಇಲ್ಲ. ಇದೊಂದು ಸಂದಿಗ್ಧಸಮಯ. ಅಂದರೆ ಮರಿಕೀಟದ ದೇಹ, ಅವಯವಗಳು ಮುಂದಿನ ಪ್ರೌಢಕೀಟದ ಆವಶ್ಯಕತೆಗಳಿಗೆ ಅನುಕೂಲವಾಗುವಂತೆ ಮಾರ್ಪಾಡಾಗುವ ಕಾಲ. ಕೋಶಾವಸ್ಥೆಯಲ್ಲಿ ಕೀಟ ಅಸಹಾಯಕ ಸ್ಥಿತಿಯಲ್ಲಿರುವುದರಿಂದ ಇದಕ್ಕೆ ವಿಶೇಷವಾದ ಸಂರಕ್ಷಣೆ ಆವಶ್ಯಕ. ಆದ್ದರಿಂದ ಕೋಶ ಶತ್ರುಗಳಿಗೆ ಸಿಕ್ಕದಂತೆ. ವಾತಾವರಣದ ವೈಪರೀತ್ಯಗಳು. ಯಾಂತ್ರಿಕ ತೊಂದರೆಗಳು ಮುಂತಾದವುಗಳಿಗೆ ಸಿಲುಕದಂತೆ ದೂರವಾಗಿರುತ್ತದೆ. ಲೆಪಿಡಾಪ್ಟಿರ ಮತ್ತು ಕೋಲಿಯಾಪ್ಟಿರ ಗಣಗಳ ಕೀಟಗಳಲ್ಲಿ ಕೊನೆಯ ಅಂತರಕಾಲದ (ಕೋಶಾವಸ್ಥೆಗೆ ಹಿಂದಿನ) ಡಿಂಭಗಳು ನೆಲದೊಳಗೆ ತೂರಿ ಮಣ್ಣಿನಗೂಡು ಕಟ್ಟಿಕೊಂಡು ಕೋಶಗಳಾಗುತ್ತವೆ. ಆದರೆ ಬಹುತೇಕ ಕೀಟಗಳು ವಿಶೇಷ ತರಹ ಗೂಡುಗಳನ್ನು (ಕಕೂನ್) ತಯಾರಿಸಿಕೊಳ್ಳುತ್ತವೆ. ತಮ್ಮ ದೇಹದಿಂದ ಉತ್ಪಾದನೆಯಾಗುವ ರೇಷ್ಮೆಎಳೆಗಳನ್ನು ಉಪಯೋಗಿಸಿ ಗೂಡನ್ನು ತಯಾರಿಸುತ್ತವೆ. ಕೆಲಮೊಮ್ಮೆ ಮರದ ಪುಡಿ, ಮಣ್ಣು, ಸಣ್ಣಕಲ್ಲು ಹರಳುಗಳನ್ನು ಉಪಯೋಗಿಸುವುದುಂಟು.

 ಕೋಶಾವಸ್ಥೆ ಕಳೆದ ಮೇಲೆ ತಲೆ ಹಾಗೂ ಮೈಮೇಲಿರುವ ಮುಳ್ಳುಗಳಿಂದ ಅಥವಾ ದವಡೆಗಳಿಂದ ಗೂಡನ್ನು ಸೀಳಿಕೊಂಡು ಪ್ರಾಯಕೀಟ ಹೊರಬೀಳುತ್ತದೆ. ಅನಂತರ ಸಮೀಪದ ಯಾವುದಾದರೂ ಆಸರೆಗೆ ನಿಧಾನವಾಗಿ ನಡೆದುಹೋಗಿ, ಮಡಿಕೆಯಾಗಿರುವ ರೆಕ್ಕೆಗಳನ್ನು ಇಳಿಜಾರಾಗಿ ಬಿಟ್ಟುಕೊಂಡು ಕುಳಿತುಕೊಳ್ಳುತ್ತದೆ. ದೇಹದಿಂದ ರೆಕ್ಕೆಗಳಿಗೆ ರಕ್ತ ಹರಿಯುವುದರಿಂದ, ಸಂಬಂಧಪಟ್ಟ ಮಾಂಸಖಂಡಗಳ ಚಲನದಿಂದ, ರೆಕ್ಕೆಗಳು ಹರಡಿಕೊಂಡು ಸಿದ್ಧವಾಗುತ್ತವೆ. ಈ ಸಮಯದಲ್ಲಿ ಕೋಶಾವಸ್ಥೆಯಲ್ಲಿ ಚಯಾಪಚಯ ಕ್ರಿಯೆಯಿಂದ ಹೊರಬೀಳುವ ತ್ಯಾಜ್ಯವಸ್ತು ಒಂದು ತೊಟ್ಟು ದ್ರವರೂಪದಲ್ಲಿ ಆಸನದ್ವಾರದಿಂದ ಹೊರಗೆ ಬರುತ್ತದೆ. ತರುವಾಯ ಕೀಟ ತನ್ನ ಮುಂದಿನ ಜೀವನವನ್ನು ಪ್ರಾರಂಭಿಸುತ್ತದೆ. ರೂಪಪರಿವರ್ತನೆಯ ಕಾಲದಲ್ಲಿ ಮರಿಕೀಟದ ಅಂಗಾಂಶಗಳು ಪೂರ್ತಿಯಾಗಿ ನಾಶವಾಗುತ್ತವೆ. ಈ ಪ್ರಕ್ರಿಯೆಯನ್ನು ಅಂಗಾಂಶನಾಶ (ಹಿಸ್ಟಾಲಿಸಿಸ್) ಎನ್ನಬಹುದು. ಈ ರೀತಿ ಅಳಿದು ಹೋದ ಅಂಗಕಟ್ಟಿನ ಸ್ಥಾನದಲ್ಲಿ ಪ್ರಾಯಕೀಟದ ಅಂಗಾಂಶಗಳು ಪ್ರೌಢ್ಯ ಕುಡಿಗಳೆಂಬ (ಇಮ್ಯಾಜಿನಲ್ ಬಡ್ಸ್) ವಿಕಸಿತ ಜೀವಕಣಗುಂಪುಗಳ ಮೂಲಕ ಉದ್ಭವಿಸುತ್ತವೆ. ಇದನ್ನು ಅಂಗಾಂಶೋತ್ಪತ್ತಿ 
(ಹಿಸ್ಪೋಜೆನಿಸಸ್) ಎಂದು ಕರೆಯಬಹುದು. ಈ ಕ್ರಿಯೆಗಳು ನಿಯಮಿತ ರೀತಿಯಲ್ಲಿ ನಡೆಯುತ್ತವೆ. ಕೀಟಜೀವನದಲ್ಲಿ ಬೆಳೆವಣಿಗೆ ಮತ್ತು ರೂಪರಿವರ್ತನೆಗೆ ದೇಹದ ಮುಂಭಾಗದಲ್ಲಿರುವ ಕೆಲವು ನಾಳರಹಿತ ಗ್ರಂಥಿಗಳ ಸ್ರಾವಗಳೇ ಕಾರಣವೆಂದು ನಿರ್ಧರಿಸಲಾಗಿದೆ. ಈ ವಿಶೇಷ ಚೋದಕ ಸ್ರಾವಗಳು (ಹಾರ್ಮೋನ್ಸ್) ಎದೆಯ ಪ್ರಥಮ ಖಂಡದ ಗ್ರಂಥಿಗಳಿಂದ ಉತ್ಪತ್ತಿಯಾಗುತ್ತವೆ. ಜೊತೆಗೆ ಕಾರ್ಪೊರ ಅಲ್ಲೇಟ ಗ್ರಂಥಿಗಳ ಸ್ರಾವ ಪ್ರೌಢಕೀಟಗಳ ಗುಣಗಳು ಮರಿಗಳಲ್ಲಿ ಹುಟ್ಟದಂತೆ ತಡೆದು ಬೆಳೆವಣಿಗೆ ಕ್ರಮಬದ್ಧವಾಗಿ ನಡೆಯುವಂತೆ ಮಾಡುತ್ತದೆ. ಡಿಂಭಾವಸ್ಥೆಯ ಕೊನೆಯ ಅಂತರ ಕಾಲದಲ್ಲಿ ಈ ರಸದೂತದ ಉತ್ಪತ್ತಿ ನಿಲ್ಲುವುದರಿಂದ ಕೀಟ ಪ್ರಾಯಕ್ಕೆ ಬರಲು ಸಾಧ್ಯವಾಗುತ್ತದೆ.

 ಬೆಳೆವಣಿಗೆಯಲ್ಲಿ ತಡೆ (ಡೈಯಪಾಸ್ó): ಅನೇಕ ಕೀಟಗಳ ಬೆಳೆವಣಿಗೆಗೆ ಒಂದು ನಿರ್ದಿಷ್ಟ ಹಂತದಲ್ಲಿ ತಡೆಯುಂಟಾಗುತ್ತದೆ. ಕೆಲವು ವಾರಗಳಿಂದ ಅನೇಕ ವರ್ಷಗಳವರೆಗೂ ಇರಬಹುದಾದ ಈ ತಡೆಯ ಅವಧಿ ಕಳೆದಮೇಲೆ ಬೆಳೆವಣಿಗೆ ಮತ್ತೆ ಮುಂದುವರಿಯುತ್ತದೆ. ಈ ತಡೆ ಜೀವಮಾನದ ಯಾವ ಹಂತದಲ್ಲಾದರೂ ಉಂಟಾಗಬಹುದು.

 ಕೀಟ ವರ್ಗೀಕರಣ: ಕೀಟಗಳ ವರ್ಗೀಕರಣ ಬಹಳ ಕ್ಲಿಷ್ಟವಾದ ಸಮಸ್ಯೆ. ಕೀಟಗಳ ಬಗ್ಗೆ ವಿಷಯ ಸಂಗ್ರಹಣೆ ಹೆಚ್ಚಿದಂತೆಲ್ಲ ಈ ವರ್ಗದ ಗಣಗಳ ಸಂಖ್ಯೆ ಹೆಚ್ಚಿರುವುದಲ್ಲದೆ ವರ್ಗೀಕರಣವೂ ಬದಲಾವಣೆಗಳಿಗೆ ಒಳಗಾಗಿದೆ. ಕೀಟವರ್ಗದ ಆಧುನಿಕ ಪದ್ಧತಿಯ ವರ್ಗೀಕರಣ 1885ರಲ್ಲಿ ಬ್ರಾಯರ್ ಎಂಬ ವಿಜ್ಞಾನಿಯಿಂದ ಪರಿಚಯಿಸಲಾಯಿತು. ಆತನು ಕೀಟಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿದ. (1) ರೆಕ್ಕೆ ಇಲ್ಲದ ಆಪ್ಟೆರಿಗೋಟ. (2) ರೆಕ್ಕೆಗಳುಳ್ಳ ಟೆರಿಗೋಟ ಬ್ರಾಯರ್ ತರುವಾಯ ಷಾರ್ಪ್, ಟಿಲ್ಯಾರ್ಡ್, ಹ್ಯಾಂಡಲಿರ್ಷ್, ಎಸಿಗ್ ಮೊದಲಾದ ಕೀಟಶಾಸ್ತ್ರಜ್ಞರು ಈ ಕಾರ್ಯವನ್ನು ಮುಂದುವರಿಸಿದರು.

 ಆಧುನಿಕರ ರೀತ್ಯ ಕೀಟವರ್ಗವನ್ನು ಕೆಳಕಂಡಂತೆ 2 ಉಪವರ್ಗಗಳಾಗಿಯೂ 29 ಗಣಗಳಾಗಿಯೂ ವಿಂಗಡಿಸಲಾಗಿದೆ.

 ಉಪವರ್ಗ 1, ಆಪ್ಟೆರಿಗೋಟ: ರೆಕ್ಕೆಯಿಲ್ಲದ, ಆದಿ ಕೀಟಗಳ ಗುಂಪು. ರೂಪಪರಿವರ್ತನೆ ಅತ್ಯಲ್ಪ ಅಥವಾ ಇಲ್ಲವೇ ಇಲ್ಲ; ಪ್ರೌಢಕೀಟದಲ್ಲಿ ಜನನದ ಉಪಾಂಗಗಳ ಹಿಂದೆ ಒಂದು ಅಥವಾ ಹೆಚ್ಚು ಜೊತೆ ಉದರದ ಉಪಾಂಗಗಳುಂಟು. ಸಂಯುಕ್ತ ನೇತ್ರಗಳಿಲ್ಲ.

 ಗಣ 1, ಥೈಸನ್ಯೂರ: ತುಂಡರಿಸುವ ವದನಾಂಗಗಳು; ಕುಡಿಮೀಸೆಯಲ್ಲಿ ಅನೇಕ ಖಂಡಗಳು ಇವೆ. ಉದರದಲ್ಲಿನ ಖಂಡಗಳ ಸಂಖ್ಯೆ 11. ಅನಿರ್ದಿಷ್ಟವಾದ, ಲೇಖಣಿಯಾಕಾರದ, ಜನನ ಬಾಹ್ಯಾಂಗಗಳ ಹಿಂದೆ ಉಪಾಂಗಗಳು; ಒಂದು ಜೊತೆ ಅನೇಕ ತುಂಡುಗಳ ಸರ್ಸಿ ಎಳೆಗಳು; ದೇಹದ ಹಿಂತುದಿಯಲ್ಲಿ ತುಂಡುಗಳಿಂದ ಕೂಡಿದ ಒಂಟಿ ಬಾಲ, ಇವು ಇದರ ಮುಖ್ಯ ಲಕ್ಷಣಗಳು. ಇದು ಅತ್ಯಂತ ಪುರಾತನ ಗುಂಪು; ಇದಕ್ಕೆ ಸೇರಿದ ಕೀಟಗಳು ಮಣ್ಣು, ಕೊಳೆಯುತ್ತಿರುವ ತರಗು, ಇರುವೆ ಗೆದ್ದಲಗೂಡು, ಮನೆಗಳಲ್ಲಿ ಹಳೆಕಾಗದದಲ್ಲಿರುವ ಮರೆಜೀವಿಗಳು.

 ಉದಾ: ಲೆಪಿಸ್ಮಾ (ಬೆಳ್ಳಿಮೀನು)

 ಗಣ 2, ಡೈಪ್ಲೂರ: ಅನೇಕ ತುಂಡುಗಳ ಕುಡಿಮೀಸೆಗಳಿವೆ. ಸಂಯುಕ್ತ ನೇತ್ರಗಳಿಲ್ಲ; ಉದರದ ಖಂಡಗಳ ಪಕ್ಕಕ್ಕೆ ಚಾಚಿರುವ ಲೇಖಣಿಯಾಕಾರದ ಉಪಾಂಗಗಳುಂಟು; ಖಂಡಕ್ಕೆ ಒಂದು ಜೊತೆ ಸರ್ಸಿ ಇದೆ; ಒಂಟಿಬಾಲ ಇಲ್ಲ; ಮಾಲ್ಪಿಗೀಯನ್ ಕೊಳವೆಗಳು ಚಿಕ್ಕವು ಅಥವಾ ಇಲ್ಲವೇ ಇಲ್ಲ. ಉದಾ: ಹೆಟಿರೋಜಾಪಿಕ್ಸ್, ಕ್ಯಾಂಪೋಡಿಯ

 ಗಣ 3, ಪ್ರೋಟ್ಯೂರ: ಇದಕ್ಕೆ ಸೇರಿದ ಕೀಟಗಳು ಸೂಕ್ಷ್ಮ ಗಾತ್ರದವು. ಚುಚ್ಚುವ ವದನಾಂಗಗಳಿವೆ. ಕುಡಿಮೀಸೆ, ಸಂಯುಕ್ತಾಕ್ಷಿಗಳಿಲ್ಲ. ಉದರದಲ್ಲಿ 11 ಖಂಡಗಳು ಮತ್ತು ಕೊನೆಯಲ್ಲಿ ಒಂದು ಕೊಂಡಿ ಇವೆ. ಮೊದಲ ಮೂರು ಖಂಡಗಳಲ್ಲಿ ಒಂದೊಂದು ಜೊತೆ ಸಣ್ಣ ಉಪಾಂಗಗಳಿವೆ. ಉದಾ: ಅಸಿರೆಂಟೋಮನ್

 ಗಣ 4, ಕೊಲೆಂಬೋಲ: ವದನಾಂಗಗಳು ಆಹಾರವನ್ನು ತುಂಡರಿಸಲು ಸಹಕಾರಿಯಾಗಿವೆ. ನಾಲ್ಕು ತುಂಡಿನ ಕುಡಿಮೀಸೆ; ಸಂಯುಕ್ತಾಕ್ಷಿಗಳಿಲ್ಲ; ಆರು ಖಂಡಗಳ ಉದರ. 1, 3, 4 
ಖಂಡಗಳಲ್ಲೂ ಉಪಾಂಗಗಳಿವೆ; ಶ್ವಾಸನಾಳಗಳು, ಮತ್ತು ಮಾಲ್ಪಿಗೀಯನ್ ಕೊಳವೆಗಳೂ ಇಲ್ಲ; ನೇರ ಬೆಳೆವಣಿಗೆ. ಉದಾ; ಪೊಡ್ಯೂರಾ(ಸ್ಪ್ರಿಂಗ್‍ಟೈಲ್ಸ್)

 ಉಪವರ್ಗ 2, ಟೆರಿಗೋಟ: ರೆಕ್ಕೆಯುಳ್ಳ ಕೀಟಗಳು. ಕೆಲವೊಮ್ಮೆ ರೆಕ್ಕೆಯಿರುವುದಿಲ್ಲ. ರೂಪಪರಿವರ್ತನೆ ಉಂಟು; ಬಾಹ್ಯ ಜನನೇಂದ್ರಿಯಗಳ ಹಿಂಭಾಗದ ಖಂಡಗಳಿಗೆ ಉಪಾಂಗಗಳಿಲ್ಲ. ಇದರಲ್ಲಿ ಎಕ್ಸೊಟೆರಿಗೋಟ ಮತ್ತು ಎಂಡೋಟೆರಿಗೋಟ ಎಂಬ ಎರಡು ಗುಂಪುಗಳಿವೆ.

 ಗುಂಪು (i) ಎಕ್ಸೊಟೆರಿಗೋಟ: ರೂಪಪರಿವರ್ತನೆ ಸರಳ ಮಾದರಿಯದು; ಕೋಶಾವಸ್ಥೆ ವಿರಳ, ರೆಕ್ಕೆಗಳು ದೇಹದ ಹೊರಭಾಗದಲ್ಲಿ ಉದ್ಭವಿಸುತ್ತವೆ; ಮರಿ ಅಪ್ಸರೆಕೀಟ; ದೇಹರಚನೆ ಮತ್ತು ಜೀವನರೀತಿಯಲ್ಲಿ ಪ್ರೌಢಕೀಟವನ್ನು ಹೋಲುತ್ತದೆ.

 ಗಣ 5, ಎಫಿಮಿರಾಪ್ಟಿರ: ಮೆತುದೇಹದ ಸಣ್ಣ ಕೀಟಗಳು. ಕುಡಿಮೀಸೆಗಳು ರೋಮಾವೃತವಾಗಿವೆ. ವದನಾಂಗಗಳು ನಶಿಸಿಹೋಗುವ ಸ್ಥಿತಿಯಲ್ಲಿವೆ. ರೆಕ್ಕೆಗಳು ಪೊರೆಗಳಂತಿವೆ. ಹಿಂದಿನ ಜೊತೆ ರೆಕ್ಕೆ ಬಹಳ ಸಣ್ಣ, ವಿಶ್ರಾಂತಿಯಲ್ಲಿರುವ ಕೀಟದಲ್ಲಿ ಮೇಲಕ್ಕೆ ಎತ್ತಿಹಿಡಿದಂತಿವೆ, ಅನೇಕ ಅಡ್ಡನರಗಳುಂಟು; ಉದರದ ಕೊನೆಯಲ್ಲಿ ಉದ್ದವಾದ. ಸರ್ಸಿ ಎಳೆಗಳ ಜೊತೆ ಇದೆ. ಒಂಟಿ ಬಾಲದಂತೆ ಒಂದು ಎಳೆ ಇದ್ದರೂ ಇರಬಹುದು; ರೂಪಪರಿವರ್ತನೆ ಅಪೂರ್ಣ; ಅಪ್ಸರೆಕೀಟ ಜಲವಾಸಿ. ಇದರ ದೇಹದ ಹಿಂಭಾಗದಲ್ಲಿ ಮೂರು ಎಳೆಗಳಿವೆ; ಕಿವಿರುಗಳುಂಟು. ಉದಾಹರಣೆ-ಮೇ ಫ್ಲೈ.(ಎಫಿಮೆರಾ)

 ಗಣ 6, ಓಡೊನೇಟ: ಮಾಂಸಾಹಾರಿ ಕೀಟಗಳು; ಒಂದೇ ಅಳತೆಯ ಎರಡು ಜೊತೆ ಪೊರೆಯಂಥ ರೆಕ್ಕೆಗಳಿವೆ. ರೆಕ್ಕೆಯಲ್ಲಿ ಒತ್ತಾಗಿ ನೇಯ್ದುಕೊಂಡಿರುವ ನರಗಳು ಮತ್ತು ಗಮನಾರ್ಹವಾದ ಕಪ್ಪು ಮಚ್ಚೆಗಳು ಇವೆ. ಸಂಯುಕ್ತನೇತ್ರಗಳು ಬಹು ದೊಡ್ಡವು, ಮತ್ತು ಚಾಚಿಕೊಂಡಿವೆ. ಕುಡಿಮೀಸೆಗಳು ಸಣ್ಣವು; ಎಳೆಯಂತಿವೆ. ಉದರ ಉದ್ದವಾಗಿ ತೆಳುವಾಗಿದೆ. ಗಂಡುಕೀಟಕ್ಕೆ ಉದರದ 2, 3ನೆಯ ಖಂಡಗಳ ಕೆಳಗೆ ಜನನಾಂಗದ ಉಪಕರಣವಿದೆ. ಅಪ್ಸರೆ ಜಲವಾಸಿ; ಅಪ್ಸರೆಯ ಕೆಳತುಟಿ ಸೊಂಡಿಲಿನಂತಿದೆ, ಗುದನಾಳ ಅಥವಾ ಬಾಲಕ್ಕೆ ಅಂಟಿರುವ ಕಿವಿರುಗಳುಂಟು. ಉದಾಹರಣೆ: ಕೊಡತಿ ಕೀಟ, ಕನ್ಯಾಕೀಟ.(ಸೆರಿಯಾಗ್ರಿನ್-ಡಾಮ್ಸೆಲ್ ಫ್ಲೈ)

 ಗಣ 7, ಪ್ಲೆಕಾಪ್ಟಿರ: ಇದಕ್ಕೆ ಸೇರಿದ ಕೀಟಗಳು ಮೆತುದೇಹದ ಕೀಟಗಳು. ಕುಡಿಮೀಸೆ ಉದ್ದವಾಗಿ ರೋಮವೃತವಾಗಿದೆ. ಪೊರೆಯಂಥ ರೆಕ್ಕೆಗಳು, ಹಿಂದಿನ ರೆಕ್ಕೆಗಳು ದೊಡ್ಡವು, ಕೀಟ ವಿಶ್ರಾಂತಿಯಲ್ಲಿದ್ದಾಗ ಬೆನ್ನಿನಮೇಲೆ ಚಪ್ಪಟೆಯಾಗಿ ಕೂಡುತ್ತವೆ; ಉದರದ ಕೊನೆಯಲ್ಲಿ ಉದ್ದವಾದ ಸರ್ಸಿ ಎಳೆಗಳಿವೆ. ಅಪ್ಸರೆ ಕೀಟ ಜಲವಾಸಿ. ಇದಕ್ಕೆ ಉದ್ದವಾದ ಕುಡಿಮೀಸೆ, ಸರ್ಸಿಗಳಿವೆ. ಕಿವಿರುಗಳುಂಟು. ಉದಾಹರಣೆ: ಕಲ್ಲು ನೊಣ (ಸ್ಟೋನ್ ಫ್ಲೈ ಪೆರ್ಲಾ). (ಸಿಂಪೆಟ್ರಮ್ ಡ್ರಾಗನ್ ಫ್ಲೈ)

 ಗಣ 8, ಗ್ರಿಲ್ಲೋಬ್ಲಾಟಾಯ್ಡಿಯ: ಇದಕ್ಕೆ ಸೇರಿದ ಕೀಟಗಳಿಗೆ ರೆಕ್ಕೆಗಳಿಲ್ಲ. ಕಣ್ಣುಗಳು ಸಾಮಾನ್ಯವಾಗಿ ಇಲ್ಲ; ಇದ್ದರೂ ಬಹಳ ಸಣ್ಣವು. ಕುಡಿಮೀಸೆ ಎಳೆಯಂತಿದೆ. ವದನಾಂಗಗಳು ಆಹಾರವನ್ನು ತುಂಡುಮಾಡಲು ಅನುಕೂಲವಾಗಿವೆ. ಕಾಲುಗಳೆಲ್ಲ ಒಂದೇ ಬಗೆಯವು. ಹೆಣ್ಣು ಕೀಟದಲ್ಲಿ ಬಾಹ್ಯ ಅಂಡೋಪಕರಣವಿದೆ. ಸರ್ಸಿ ಉದ್ದ, 8 ತುಂಡುಗಳಿವೆ.

 ಗಣ 9, ಅರ್ಥಾಪ್ಟಿರ: ದೊಡ್ಡ ಅಥವಾ ಮಧ್ಯಮ ಗಾತ್ರದ ಕೀಟಗಳು. ರೆಕ್ಕೆಗಳು ಇರಬಹುದು ಅಥವಾ ಇಲ್ಲದಿರಬಹುದು. ಎದೆಯ ಮೊದಲ ಖಂಡ ದೊಡ್ಡದು; ಹಿಂದಿನ ಕಾಲುಗಳು ದೊಡ್ಡವು, ನೆಗೆಯಲು ಉಪಯುಕ್ತವಾಗಿವೆ. ಮುಂದಿನ ರೆಕ್ಕೆಗಳು ಸ್ವಲ್ಪ ದಪ್ಪವಾಗಿವೆ. ಹೆಣ್ಣು ಕೀಟಕ್ಕೆ ಬಾಹ್ಯ ಅಂಡೋಪಕರಣವಿದೆ. ಸರ್ಸಿಗಳು ಚಿಕ್ಕವು, ವಿಭಾಗವಾಗಿಲ್ಲ. ವಿಶೇಷ ಶ್ರವಣೇಂದ್ರಿಯ ಮತ್ತು ಶಬ್ದೋತ್ಪತ್ತಿ ಅಂಗಗಳುಂಟು. ರೂಪ ಪರಿವರ್ತನೆ ಅತ್ಯಲ್ಪ. ಕೀಟವರ್ಗದಲ್ಲೇ ಅತ್ಯಂತ ದೊಡ್ಡ ಸಮುದಾಯ ಇದು. ಉದಾಹರಣೆ: ಚಿಟ್ಟೆ, ಮಿಡತೆ, ಲೋಕಸ್ಟ್ ಮಿಡತೆ(ಶಿಸ್ಟೋ ಸೆರ್ಕಾ), ಚಿಮ್ಮಂಡೆ (ಕ್ರಿಕೆಟ್)(ಗ್ರಿಲ್ಲೋಟಾಲ್ಪಾ)

 ಗಣ 10, ಫಾಸ್ಮಿಡ: ದೊಡ್ಡ ಗಾತ್ರದ ಕೀಟಗಳು, ದೇಹ ಉದ್ದ ಹಾಗೂ ತೆಳುವಾಗಿದೆ. 
ದೇಹದ ಆಕಾರ ಕೊಳವೆಯಂತೆ ಇಲ್ಲವೆ ಎಲೆಯಂತೆ. ಎದೆಯ ಮೊದಲ ಖಂಡ ಚಿಕ್ಕದು, ಎರಡನೆಯ ಮತ್ತು ಮೂರನೆಯ ಖಂಡಗಳು ಉದ್ದವಾಗಿವೆ. ಕಾಲುಗಳೆಲ್ಲ ಒಂದೇ ಬಗೆಯವು. ಸರ್ಸಿ ಕಿರಿದು; ಶ್ರವಣೇಂದ್ರಿಯಗಳಾಗಲಿ, ಶಬ್ದೋತ್ಪತ್ತಿ ಅಂಗಗಳಾಗಲಿ ಇಲ್ಲ. ಈ ಕೀಟಗಳು ಮೊಟ್ಟೆಗಳನ್ನು ಒಂಟೊಂಟಿಯಾಗಿ ಇಡುತ್ತವೆ. ಉದಾಹರಣೆ: ಕಡ್ಡಿಕೀಟ, (ಕಾರಾಸಿಯಸ್) ಎಲೆಕೀಟ (ಲೀಫ್ ಇನ್ಸೆಕ್ಟ್). (ಫಿಲ್ಲಿಯಂ)

 ಗಣ 11, ಡರ್ಮಾಪ್ಟಿರ: ಇದರ ಕೀಟಗಳು ಬಲು ಉದ್ದವಾದುವು. ಇವುಗಳ ಮುಂದಿನ ರೆಕ್ಕೆಗಳು ಚಿಕ್ಕವು; ಚಕ್ಕಳದಂತಿವೆ. ಹಿಂದಿನ ರೆಕ್ಕೆಗಳು ಅರ್ಧಚಕ್ರಾಕಾರದವು, ತೆಳುವಾದ ಪೊರೆಯಂತಿವೆ; ರೆಕ್ಕೆ ಇಲ್ಲದಿರುವುದೇ ಸಾಮಾನ್ಯ; ಸರ್ಸಿಗಳು ಸಾಮಾನ್ಯವಾಗಿ ಗಡುಸಾದ ಚಿಮಟದಂತಿವೆ; ಬಾಹ್ಯ ಅಂಡೋಪಕರಣ ಚಿಕ್ಕದು ಅಥವಾ ಇಲ್ಲವೇ ಇಲ್ಲ; ರೂಪಪರಿವರ್ತನೆ ಅತ್ಯಲ್ಪ ಅವಧಿಯದು ಅಥವಾ ಇಲ್ಲವೇ ಇಲ್ಲ. ಉದಾಹರಣೆ: ಕರ್ಣಕೀಟ. ಫಾರ್ಫಿಕ್ಯುಲಾ

 ಗಣ 12, ಎಂಬಿಯಾಪ್ಟಿರ: ರೇಷ್ಮೆಯ ಸುರಂಗಗಳಲ್ಲಿ ವಾಸಿಸುವ ಈ ಕೀಟಗಳು ಸಾಮಾಜಿಕ ಜೀವಿಗಳು; ಮೊದಲನೆಯ ಕಾಲಿನ ಮೊದಲನೆಯ ಟಾರ್ಸಸ್ ತುಂಡು ಬಹಳ ದಪ್ಪ. ಹೆಣ್ಣಿಗೆ ರೆಕ್ಕೆಗಳಿಲ್ಲ. ಗಂಡಿನ ಎರಡು ರೆಕ್ಕೆಗಳೂ ಒಂದೇ ಸಮವಾಗಿವೆ. ಗಂಡಿನ ಸರ್ಸಿಗಳಲ್ಲಿ ಸಮಪಾಶ್ರ್ವತೆ ಇಲ್ಲ. ಹೆಣ್ಣುಕೀಟ ಆಕಾರದಲ್ಲಿ ಡಿಂಭದಂತಿದೆ; ರೂಪಪರಿವರ್ತನೆ ಗಂಡಿನಲ್ಲಿ ಅತ್ಯಲ್ಪ ಅವಧಿಯದು; ಹೆಣ್ಣಿನಲ್ಲಿ ಇಲ್ಲವೇ ಇಲ್ಲ.

 ಗಣ 13, ಡಿಕ್ಟಿಯಾಪ್ಟಿರ: ಕುಡಿಮೀಸೆ ಅನೇಕ ಖಂಡಗಳುಳ್ಳ ಕೋಲಿನಂತಿದೆ. ಕಾಲುಗಳು ಒಂದೇ ಬಗೆಯವು ಅಥವಾ ಮುಂದಿನವು ಬೇಟೆ ಹಿಡಿಯಲು ಉಪಯುಕ್ತ; ಕಾಲಿನ ಕಾಕ್ಸ ದೊಡ್ಡದು, ಮುಂದಿನ ರೆಕ್ಕೆಗಳು ದಪ್ಪ. ಹೆಣ್ಣಿನ ಬಾಹ್ಯ ಅಂಡೋಪಕರಣ ಚಿಕ್ಕದು. ಗಂಡಿನ ಉದರದ 9ನೆಯ ಖಂಡಕ್ಕೆ ಒಂದು ಜೊತೆ ಸ್ಟೈಲ್ಸ್ ಎಂಬ ಉಪಾಂಗಗಳು ಅಂಟಿಕೊಂಡಿವೆ. ಸರ್ಸಿ ಅನೇಕ ತುಂಡುಗಳುಳ್ಳದ್ದು; ವಿಶೇಷ ಶಬ್ದೋತ್ಪತ್ತಿ ಅಂಗಗಳು, ಶ್ರವಣೇಂದ್ರಿಯಗಳು ಇಲ್ಲ. ಉದಾಹರಣೆ: ಜಿರಲೆ ಪೆರಿಪ್ಲಾನೇಟಾ ಮತ್ತು ಒಂಟೆಹುಳು. ಮ್ಯಾಂಟಿಸ್‍ರಿಲಿಜಿಯೇಸ

 ಗಣ 14, ಐಸಾಪ್ಟಿರ: ಇವು ಸಾಮಾಜಿಕ ಮತ್ತು ರೂಪವೈವಿಧ್ಯವನ್ನು ತೋರುವ ಕೀಟಗಳು. ರೆಕ್ಕೆಗಳು ಒಂದೇ ಸಮವಾಗಿವೆ. ಅವು ಬಹಳ ಉದ್ದ ಮತ್ತು ಪೊರೆಯಂತಿವೆ, ಕೀಟ, ವಿಶ್ರಾಂತಿಯಲ್ಲಿದ್ದಾಗ ಬೆನ್ನಿನ ಮೇಲೆ ಒಂದರಮೇಲೆ ಒಂದು ಕೂಡುತ್ತವೆ. ಸುಲಭವಾಗಿ ಉದುರುವಂಥವು; ಸರ್ಸಿ ಬಹು ಕಿರಿದು; ರೂಪ ಪರಿವರ್ತನೆ ಅಲ್ಪಾವಧಿಯದು ಅಥವಾ ಇಲ್ಲವೇ ಇಲ್ಲ. ಉದಾಹರಣೆ: ಗೆದ್ದಲು-ಮೈಕ್ರೋಟರ್ಮಿಸ್ ಒಬೇಸಿ

 ಗಣ 15, eóÉೂೀರಾಪ್ಟಿರ: ರೆಕ್ಕೆಯುಳ್ಳ ಅಥವಾ ರೆಕ್ಕೆಯಿಲ್ಲದ ಕೀಟಗಳು ಈ ಗುಂಪಿಗೆ ಸೇರಿವೆ. ಕುಡಿಮೀಸೆ ಮಣಿಸರದಂತಿದ್ದು 9 ತುಂಡುಗಳಿಂದ ಕೂಡಿದೆ. ರೆಕ್ಕೆಗಳು ಸಾಮಾನ್ಯವಾಗಿ ಇಲ್ಲ. ಇದ್ದರೆ ತೊಟ್ಟಿನ ಹತ್ತಿರ ಸುಲಭವಾಗಿ ಕಳಚಿಕೊಳ್ಳಬಲ್ಲವು; ಎದೆಯ ಮೊದಲ ಖಂಡ ದೊಡ್ಡದು; ಬಾಹ್ಯ ಅಂಡೋಪಕರಣವಿಲ್ಲ; ರೂಪಪರಿವರ್ತನೆ ವಿರಳ.

 ಗಣ 16, ಸೋಕಾಪ್ಟಿರ: 15-20 ತುಂಡುಗಳ ಎಳೆಯಂಥ ಕುಡಿಮೀಸೆಯುಳ್ಳ ಕೀಟಗಳು; ಎದೆಯ ಮೊದಲ ಖಂಡ ಕಿರಿದು; ಸರ್ಸಿ ಇಲ್ಲ ಉದಾಹರಣೆ: ಪುಸ್ತಕಹೇನು, ಧೂಳು ಹೇನು.

 ಗಣ 17, ಮ್ಯಾಲೊಫೇಗ: ಇವಕ್ಕೆ ರೆಕ್ಕೆಗಳಿಲ್ಲ. ಇವು ಹಕ್ಕಿಗಳ (ವಿರಳವಾಗಿ ಚತುಷ್ಟಾದಗಳ) ಹೊರಮೈಮೇಲಿನ ಪರಾವಲಂಬಿ ಕೀಟಗಳು; ಕಣ್ಣುಗಳು ಸಣ್ಣವು. ಸರಳಅಕ್ಷಿಗಳಿಲ್ಲ; 3 ಅಥವಾ 5 ತುಂಡುಗಳ ಕುಡಿಮೀಸೆ, ತುಂಡರಿಸುವ ವದನಾಂಗಗಳು; ಎದೆಯ ಕೆಳಭಾಗದಲ್ಲಿನ ಶ್ವಾಸದ್ವಾರಗಳು ಇವುಗಳ ಮುಖ್ಯ ಲಕ್ಷಣಗಳು. ಇವು ರೆಕ್ಕೆ, ಕೂದಲುಗಳ ತುಣುಕುಗಳನ್ನೇ ತಿನ್ನುತ್ತವೆ. ಉದಾಹರಣೆ: ಪಕ್ಷಿಹೇನು. ಲಿಪ್ಯುರಸ್

 ಗಣ 18, ಸೈಫಂಕ್ಯುಲೇಟ ಅಥವಾ ಅನಾಪ್ಲೂರ: ಚತುಷ್ಟಾದಿಗಳ ಹೊರಮೈಮೇಲೆ ಜೀವಿಸುವ ರೆಕ್ಕೆ ಇಲ್ಲದ, ಪರಾವಲಂಬಿ ಕೀಟಗಳು; ಕಣ್ಣುಗಳು ಚಿಕ್ಕವು ಅಥವಾ ಇಲ್ಲವೇ ಇಲ್ಲ; ಸರಳ ಅಕ್ಷಿಗಳಿಲ್ಲ; 3-5 ತುಂಡುಗಳ ಕುಡಿಮೀಸೆ; ವದನಾಂಗಗಳು ಚುಚ್ಚಿ ಹೀರುವುದ
ಕ್ಕೆ ಮಾರ್ಪಾಟು ಹೊಂದಿವೆ; ಬೇಕಿಲ್ಲದಾಗ ಹಿಂದಕ್ಕೆ ತಲೆಯೊಳಗೆ ಸರಿಯುತ್ತವೆ. ಎದೆಯ ಶ್ವಾಸದ್ವಾರಗಳು ಮೇಲ್ಭಾಗದಲ್ಲಿವೆ; ಸರ್ಸಿ ಇಲ್ಲ; ರೂಪ ಪರಿವರ್ತನೆ ಇಲ್ಲ. ಉದಾಹರಣೆ: ಹೇನು (ಪೆಡಿಕ್ಯುಲಸ್) ಕೂರೆ.

 ಗಣ 19, ಹೆಮಿಪ್ಟಿರ ಅಥವಾ ರಿಂಕೋಟ: ಸಾಮಾನ್ಯವಾಗಿ ಎರಡು ಜೊತೆ ರೆಕ್ಕೆಗಳುಂಟು. ಮುಂದಿನದು ಹಿಂದಿನದಕ್ಕಿಂತ (ಹೋಮಾಪ್ಟಿರದಲ್ಲಿ) ಸಂಪೂರ್ಣವಾಗಿ ಅಥವಾ (ಹೆಟಿರಾಪ್ಟಿರದಲ್ಲಿ) ತೊಟ್ಟಿನ ಸಮೀಪದಲ್ಲಿ ಮಾತ್ರ ಹೆಚ್ಚು ಗಡಸು; ವದನಾಂಗಗಳು ಚುಚ್ಚಿ, ಹೀರಲು ಉಪಯುಕ್ತವಾಗಿವೆ. ಕೆಳತುಟಿ ಮೇಲ್ಮುಖದಲ್ಲಿ ಕಾಲುವೆಯಂತಿರುವ ಒರೆಯಂತಿದೆ, ಮತ್ತು ಸೂಜಿಗಳಂತೆ ಮಾರ್ಪಾಡಾಗಿರುವ ದವಡೆ ಮ್ಯಾಕ್ಸಿಲಗಳಾದ ಎರಡು ಜೊತೆ ಮುಳ್ಳುಗಳು ಇದರೊಳಗೆ ಸೇರಿಕೊಳ್ಳುತ್ತವೆ; ರೂಪಪರಿವರ್ತನೆ ಅಪೂರ್ವವಾಗಿ ಸಂಪೂರ್ಣ ಮಾದರಿಯದು. ಈ ಕೀಟಗಳು ಸಸ್ಯರಸಗಳನ್ನು ಹೀರಿ ಬಹಳ ನಷ್ಟಮಾಡುತ್ತವೆ. ಉದಾಹರಣೆ: ಸಸ್ಯತಿಗಣೆ, ಸಸ್ಯಹೇನು. ಏಫಿಸ್

 ಗಣ 20, ಥೈಸನಾಪ್ಪಿರ ಅಥವಾ ಫೈಸಾಪೊಡ: ಅತ್ಯಂತ ಸಣ್ಣಕೀಟಗಳು. 6 ರಿಂದÀ 10 ತುಂಡುಳ್ಳ ಕುಡಿಮೀಸೆ ಉಂಟು; ವದನಾಂಗಗಳು ಚುಚ್ಚುವ ಮಾದರಿಯವು. ರೆಕ್ಕೆಗಳು ಇದ್ದರೆ ಸಣ್ಣಗಾತ್ರದವು; ಅಂಚಿನಲ್ಲಿ ಉದ್ದದ ಕೂದಲುಗಳಿವೆ. ಸರ್ಸಿ ಇಲ್ಲ; ರೂಪಪರಿವರ್ತನೆಯಲ್ಲಿ ಒಂದೆರಡು ಕೋಶಾವಸ್ಥೆಗಳುಂಟು. ಉದಾಹರಣೆ: ಥ್ರಿಪ್ಸ್ (ನುಸಿ ಕೀಟಗಳು)

 ಗುಂಪು (ii), ಎಂಡೋಟೆರಿಗೋಟ: ರೂಪಪರಿವರ್ತನೆ ಜಟಿಲವಾಗಿದೆ. ಕೋಶಾವಸ್ಥೆ ಉಂಟು; ರೆಕ್ಕೆಗಳು ದೇಹದೊಳಗಿನಿಂದ ಮೂಡುತ್ತವೆ.

 ಗಣ 21, ನ್ಯೂರಾಪ್ಟಿರ: ಸಣ್ಣದರಿಂದ ದೊಡ್ಡಗಾತ್ರದ ಮೆತುದೇಹದ ಕೀಟಗಳು. ಕುಡಿಮೀಸೆಗಳು ಉದ್ದವಾಗಿವೆ. ಎರಡು ಜೊತೆ ಒಂದೇ ಸಮನಾದ ಪೊರೆಯಂಥ ರೆಕ್ಕೆಗಳು, ವಿಶ್ರಾಂತಿಯಲ್ಲಿದ್ದಾಗ ಮೇಲ್ಚಾವಣಿಯಂತೆ ಮೈಮೇಲೆ ಕೂಡುವುವು; ಸರ್ಸಿ ಇಲ್ಲ; ಮರಿಹುಳು ಮಾಂಸಾಹಾರಿ, ತುಂಡರಿಸುವ ಅಥವಾ ಹೀರುವ ವದನಾಂಗಗಳುಳ್ಳುದ್ದು. ನೀರಿನಲ್ಲಿ ವಾಸಿಸುವ ಡಿಂಭಗಳಲ್ಲಿ ಉದರ ಭಾಗದಲ್ಲಿ ಕಿವಿರುಗಳಿವೆ. ಉದಾಹರಣೆ: ಲೇಸ್‍ವಿಂಗ್ಸ್ ಮತ್ತು ಮಿರ್ಮಿಲಿಯಾನ್ (ಆಂಟ್‍ಲಯನ್).

 ಗಣ 22, ಮೀಕಾಪ್ಟಿರ: ಸಣ್ಣ ಅಥವಾ ಮಧ್ಯಮ ಗಾತ್ರದ ಮಾಂಸಾಹಾರಿ ಕೀಟಗಳು; ಉದ್ದನೆಯ ಎಳೆಯಂಥ ಕುಡಿಮೀಸೆಗಳಿವೆ; ತಲೆಯ ಮುಂಭಾಗ ಕೊಕ್ಕಿನಂತೆ ಚಾಚಿಕೊಂಡಿದೆ; ತುಂಡರಿಸುವ ವದನಾಂಗಗಳು; ಕಾಲುಗಳು ಉದ್ದ, ತೆಳು; ರೆಕ್ಕೆಗಳು ಒಂದೇ ಸಮ; ಪೊರೆಯಂತಿವೆ, ಕೀಟ ವಿಶ್ರಾಂತಿಯಲ್ಲಿದ್ದಾಗ ಚಪ್ಪಟೆಯಾಗಿ ಕೂಡುತ್ತವೆ; ಉದರ ಉದ್ದ; ಸರ್ಸಿ ಕಿರಿದು; ಗಂಡಿನ ಬಾಹ್ಯ ಜನನಾಂಗಗಳು ಎದ್ದುಕಾಣುತ್ತವೆ; ಡಿಂಭಗಳಿಗೆ 3 ಜೊತೆ ಎದೆಭಾಗದ ಕಾಲುಗಳಿವೆ. ಉದರಭಾಗದಲ್ಲಿ ಕಾಲುಗಳಿರಬಹುದು; ವದನಾಂಗಗಳು ಕಡಿಯುವ ಮಾದರಿಯವು.

 ಗಣ 23, ಲೆಪಿಡಾಪ್ಟಿರ; ಈ ಗಣದ ಕೀಟಗಳಿಗೆ ಎರಡು ಜೊತೆ ಪೊರೆಯಂಥ ರೆಕ್ಕೆಗಳಿವೆ. ರೆಕ್ಕೆಗಳಲ್ಲಿ ಅಡ್ಡನರಗಳು ಕಡಿಮೆ. ಮೈ ಮತ್ತು ರೆಕ್ಕೆ ಉಪಾಂಗಗಳ ಮೇಲೆಲ್ಲ ಶಲ್ಕಗಳಿವೆ. ದವಡೆಗಳು ಇಲ್ಲದಿರಬಹುದು. ಇದ್ದರೂ ಕ್ಷೀಣಿಸಿವೆ. ಇದರಿಂದ ಮಾಕ್ಸಿಲಗಳು ರಸ ಹೀರಬಲ್ಲ ಸೊಂಡಿಲಾಗಿ ಮಾರ್ಪಾಡಾಗಿವೆ. ಡಿಂಭಗಳ ದೇಹ ನಿರ್ದಿಷ್ಟವಾದ ಖಂಡಗಳಾಗಿ ವಿಭಾಗವಾಗಿದೆ. ದೇಹದ ಪಕ್ಕಗಳಲ್ಲಿ ಸಾಲಾಗಿ ಶ್ವಾಸದ್ವಾರಗಳಿವೆ. ಕಾಲುಗಳು 8 ಜೊತೆ. ಉದಾಹರಣೆ: ಚಿಟ್ಟೆ (ಬಟರ್‍ಫ್ಲೈ), ಪತಂಗ (ಮಾತ್).

 ಗಣ 24, ಟ್ರೈಕಾಪ್ಟಿರ: ಪತಂಗಗಳನ್ನು ಹೋಲುವ, ಸಣ್ಣದರಿಂದ ಮಧ್ಯಮ ಗಾತ್ರದ, ರೋಮಾವೃತವಾದ ಕುಡಿಮೀಸೆಗಳುಳ್ಳ ಕೀಟಗಳ ಗುಂಪು. ದವಡೆಗಳು ಸಾಮಾನ್ಯವಾಗಿ ಇಲ್ಲ. ಇದ್ದರೂ ಕ್ಷೀಣಿಸಿವೆ. ರೆಕ್ಕೆಗಳು ಪೊರೆಯಂತಿದ್ದು ದಟ್ಟವಾದ ಕೂದಲುಗಳಿಂದ ಕೂಡಿವೆ ಮತ್ತು ವಿಶ್ರಾಂತಿಯಲ್ಲಿ ಮೇಲ್ಚಾವಣಿಯಂತೆ ಬೆನ್ನಿನ ಮೇಲೆ ಕೂಡುತ್ತವೆ; ಮುಂದಿನ ರೆಕ್ಕೆಗಳು ಉದ್ದ, ಹಿಂದಿನ ರೆಕ್ಕೆಗಳು ಅಗಲ. ಡಿಂಭಗಳು ಜಲವಾಸಿಗಳು. ಇವುಗಳ ದೇಹದ ಖಂಡಗಳು ನಿರ್ದಿಷ್ಟವಾಗಿ ವಿಭಾಗಿಸಲ್ಪಟ್ಟಿವೆ; ಮತ್ತು ದೇಹದ ಹಿಂದಿನ ತುದಿಂiÀiಲ್ಲಿ ಕೊಕ್ಕೆಯುಳ್ಳ ಉಪಾಂಗಗಳಿವೆ; ಉದಾಹರಣೆ: ಕ್ಯಾಡಿಸ್ ನೊಣ.
 ಗಣ 25, ಡಿಪ್ಟಿರ: ಒಂದೇ ಜೊತೆ ಪೊರೆಯಂಥ ರೆಕ್ಕೆಯುಳ್ಳ ಕೀಟಗಳು ಇವು. ಹಿಂದಿನ ಜೊತೆ ರೆಕ್ಕೆಗಳು ಗುಬುಟಾಕಾರದ ಸಮತೋಲನಾಂಗಗಳಾಗಿ ಪರಿವರ್ತನೆಯಾಗಿವೆ. ವದನಾಂಗಗಳು ರಸರೂಪದ ಆಹಾರವನ್ನು ಹೀರುವುದಕ್ಕೆ ಉಪಯುಕ್ತವಾಗಿವೆ. ಕೆಲವು ವೇಳೆ ಸೊಂಡಿಲಿನಂತೆಯೂ ಕೆಲವು ಕೀಟಗಳಲ್ಲಿ ಚುಚ್ಚುವುದಕ್ಕೂ ಹೊಂದಿಕೊಂಡಿವೆ; ದವಡೆಗಳು ಅಪೂರ್ವ. ಕೆಳತುಟಿ ಒಂದು ಜೊತೆ ದಪ್ಪನಾದ ಹಾಲೆಗಳಂತಿರುವುದುಂಟು; ಎದೆಯ ಮೊದಲ ಮತ್ತು ಮೂರನೆಯ ಖಂಡಗಳು ಚಿಕ್ಕವು ಮತ್ತು ಮಧ್ಯದ ಖಂಡದೊಡನೆ ಅಂಟಿಕೊಂಡಿವೆ. ರೂಪಪರಿವರ್ತನೆ ಸಂಪೂರ್ಣ; ಡಿಂಭದ ದೇಹ ನಿರ್ದಿಷ್ಟವಾದ ಖಂಡಗಳಾಗಿ ವಿಭಾಗವಾಗಿದೆ; ಕಾಲುಗಳಿಲ್ಲ, ತಲೆ ಕಿರಿದು, ಒಳಗೆ ಎಳೆದುಕೊಳ್ಳಲ್ಪಟ್ಟಿದೆ; ಉದಾಹರಣೆ: ನೊಣ, ಸೊಳ್ಳೆ ಇತ್ಯಾದಿ.

 ಗಣ 26, ಸೈಫನಾಪ್ಟಿರ ಅಥವಾ ಏಫ್ಯಾನಿಪ್ಟಿರ: ಸಣ್ಣ ಗಾತ್ರದ, ರೆಕ್ಕೆಗಳಿಲ್ಲದ, ಪಕ್ಕದಿಂದ ಪಕ್ಕಕ್ಕೆ ಅದುಮಿದ ದೇಹವುಳ್ಳ ಕೀಟಗಳು; ಸಂಯುಕ್ತಾಕ್ಷಿಗಳಿಲ್ಲ, 2 ಸರಳ ಅಕ್ಷಿಗಳಿವೆ; ಕುಡಿಮೀಸೆಗಳು ಸಣ್ಣಗಾತ್ರದವು ಮತ್ತು ದಪ್ಪ; ವದನಾಂಗಗಳು ಚುಚ್ಚುವುದಕ್ಕೂ ಹೀರುವುದಕ್ಕೂ ಉಪಯುಕ್ತ; ಡಿಂಭಗಳು ಉದ್ದ; ಅವುಗಳ ದೇಹದ ಖಂಡಗಳು ನಿರ್ದಿಷ್ಟವಾಗಿ ಬಿಡಿಸಲ್ಪಟ್ಟಿವೆ. ಕಾಲುಗಳಿಲ್ಲ; ಕೋಶಾವಸ್ಥೆಯನ್ನು ಗೂಡುಗಳಲ್ಲಿ ಕಳೆಯುತ್ತವೆ. ಈ ಕೀಟಗಳು ಪ್ರೌಢಾವಸ್ಥೆಯಲ್ಲಿ ಬಿಸಿರಕ್ತದ ಪ್ರಾಣಿಗಳ ಮೈಮೇಲೆ ಪರಾವಲಂಬಿಗಳಾಗಿ ಜೀವಿಸುತ್ತವೆ. ಉದಾಹರಣೆ: ಚಿಗಟ(ಫ್ಲೀ)-ಕ್ಸಿನೋಪ್ಸಿಲ್ಲಾ

 ಗಣ 27, ಹೈಮೆನಾಪ್ಟಿರ: ಈ ಗಣದ ಕೀಟಗಳಿಗೆ ಎರಡು ಜೊತೆ ಪೊರೆಯಂಥ ರೆಕ್ಕೆಗಳಿವೆ. ಹಿಂದಿನ ರೆಕ್ಕೆ ಮುಂದಿನದಕ್ಕಿಂತ ಚಿಕ್ಕದು, ಸಣ್ಣ ಕೊಕ್ಕೆಗಳಿಂದ ಎರಡು ರೆಕ್ಕೆಗಳೂ ಸೇರಿಕೊಂಡಿವೆ; ವದನಾಂಗಗಳು ತುಂಡರಿಸುವುದಕ್ಕೂ ಅನೇಕ ವೇಳೆ ನೆಕ್ಕುವುದಕ್ಕೂ ಹೀರುವುದಕ್ಕೂ ಅನುಕೂಲವಾಗಿವೆ. ಉದರ ಕಿರಿದಾಗಿದೆ. ಅದರ ಮೊದಲ ಖಂಡ ಎದೆಯ ಮೂರನೆಯ ಖಂಡದೊಡನೆ ಕೂಡಿಕೊಂಡಿರುವುದುಂಟು; ಬಾಹ್ಯ ಅಂಡೋಪಕರಣ ಉಂಟು ಮತ್ತು ಅದು ಗರಗಸದಾಕಾರದಲ್ಲಿದ್ದು ಕುಯ್ಯುವುದಕ್ಕೆ ಚುಚ್ಚುವುದಕ್ಕೆ ಅಥವಾ ಕುಟುಕುವುದಕ್ಕೆ ಮಾರ್ಪಾಡು ಹೊಂದಿರಬಹುದು; ರೂಪಪರಿವರ್ತನೆ ಸಂಪೂರ್ಣ; ಡಿಂಭ ಸಾಮಾನ್ಯವಾಗಿ ಕಾಲಿಲ್ಲದ್ದು, ಅಪರೂಪವಾಗಿ ಕಾಲುಗಳಿರಬಹುದು; ಕೋಶಾವಸ್ಥೆ ಗೂಡಿನಲ್ಲೇ ನಡೆಯುವುದು ಸ್ವಾಭಾವಿಕ ಲಕ್ಷಣ. ಈ ಗಣ ಕೀಟವರ್ಗದಲ್ಲಿ ಅತ್ಯಂತ ಉನ್ನತ ಸ್ಥಾನಗಳಿಸಿರುವ ದೊಡ್ಡ ಗಣ. ಉದಾಹರಣೆ: ಇರುವೆ, ಜೇನು, ಕಣಜ, ಗರಗಸ ನೊಣ, ಬಡಗಿ ಜೇನು.

 ಗಣ 28, ಕೋಲಿಯಾಪ್ಟಿರ: ಸಣ್ಣದರಿಂದ ದೊಡ್ಡ ಗಾತ್ರದ ಕೀಟಗಳು; ಮುಂದಿನ ರೆಕ್ಕೆಗಳು ಚಕ್ಕಳದಂತೆ ಗಡಸು ಮತ್ತು ಕೀಟ ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಬೆನ್ನಿನ ಮೇಲಿನ ನಡುರೇಖೆಯಲ್ಲಿ ಎರಡೂ ಕೂಡಿಕೊಳ್ಳುತ್ತವೆ. ಕೆಳರೆಕ್ಕೆಗಳು ಪೊರೆಯಂತಿದ್ದು, ಮೇಲಿನ ರೆಕ್ಕೆಯ (ಎಲಿಟ್ರ) ಕೆಳಗೆ ಮಡಿಚಿಕೊಂಡಿವೆ. ಕೆಲವೊಮ್ಮೆ ಕೆಳಗಿನ ರೆಕ್ಕೆಗಳು ಇಲ್ಲದಿರಬಹುದು. ಎದೆಯ ಮೊದಲ ಖಂಡ ದೊಡ್ಡದು, ಎರಡನೆಯ ಖಂಡ ಬಹಳ ಕಿರುದು: ರೂಪರಿವರ್ತನೆ ಸಂಪೂರ್ಣ; ಡಿಂಭಗಳಿಗೆ ಅಪೂರ್ವವಾಗಿ ಕಾಲುಗಳಿಲ್ಲ; ಪ್ರಾಣಿ ಸಾಮ್ರಾಜ್ಯದಲ್ಲೇ ಅತ್ಯಂತ ದೊಡ್ಡ ವರ್ಗವಿದು; ಇದುವರೆಗೆ 2,20,000ಕ್ಕೂ ಹೆಚ್ಚು ಪ್ರಭೇದಗಳನ್ನು ವಿವರಿಸಲಾಗಿದೆ. ಉದಾ: ಜೀರುಂಡೆ, ದುಂಬಿ, ಚಿಪ್ಪಿನಕೀಟ, ಸೊಂಡಿಲು ಕೀಟ.

 ಗಣ 29, ಸ್ಟ್ರೆಪ್ಸಿಪ್ಟಿರ: ಆತಿಥೇಯ ಪ್ರಾಣಿಯ ದೇಹದೊಳಗೆ ವಾಸಿಸುವ ಸೂಕ್ಷ್ಮಗಾತ್ರದ ಪರಾವಲಂಬಿಗಳು. ಗಂಡು ಮಾತ್ರ ಸ್ವತಂತ್ರ ಜೀವಿ. ಕುಡಿಮೀಸೆಗಳು ದಪ್ಪಗಿದ್ದು ಸ್ಪಷ್ಟವಾಗಿವೆ. ಮುಂದಿನ ರೆಕ್ಕೆಗಳು ಸಣ್ಣವು; ಅವುಗಳ ಆಕಾರ ದೊಣ್ಣೆಯಂತೆ. ಹಿಂದಿನ ರೆಕ್ಕೆಗಳು ದೊಡ್ಡವು ಮತ್ತು ಅವುಗಳ ಆಕಾರ ಬೀಸಣಿಗೆಯಂತೆ. ಹೆಣ್ಣು ಕೀಟ ಸಾಧಾರಣವಾಗಿ ತನ್ನ ಹೊರಚರ್ಮದ ಗೂಡಿನಲ್ಲಿ ಸೇರಿಕೊಂಡು, ಆತಿಥೇಯ ಪ್ರಾಣಿಯ ದೇಹದೊಳಗೆ ವಾಸಿಸುತ್ತದೆ. ಕೆಲವು ಪ್ರಭೇದಗಳಲ್ಲಿ ಹೆಣ್ಣು ಕೀಟಗಳು ಆತಿಥೇಯ ಪ್ರಾಣಿಯನ್ನು ಬಿಟ್ಟು ಹೊರಬರುತ್ತವೆ; ಬೆಳೆವಣಿಗೆಯಲ್ಲಿ ಒಂದಕ್ಕಿಂತ ಹೆಚ್ಚು ರೂಪದ ಡಿಂಭಗಳುಂಟು. ಈ ಗಣದ ನಿರ್ದಿಷ್ಟವಾದ ಸ್ಥಾನ ಖಚಿತವಾಗಿ ನಿರ್ಧರಿಸಲ್ಪಟಿ
್ಟಲ್ಲ; ಕೆಲವು ವಿಜ್ಞಾನಿಗಳು ಇದನ್ನು ಕೋಲಿಯಾಪ್ಟಿರ ಗಣದಲ್ಲಿ ಸೇರಿಸುತ್ತಾರೆ.   

(ಡಿ.ಎಸ್.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ